ಸೋಮವಾರಪೇಟೆ, ಮಾ. 14: ಜಾಗದ ದಾಖಲೆಗಳಿಗಾಗಿ ಕಳೆದ 10 ವರ್ಷಗಳಿಂದ ತಾಲೂಕು ಕಚೇರಿಗೆ ಅಲೆದು ಸುಸ್ತಾಗಿರುವ ವಯೋವೃದ್ಧರೋರ್ವರು ಆತ್ಮಹತ್ಯೆಯ ನಿರ್ಧಾರಕ್ಕಿಳಿದಿರುವ ಆಘಾತಕಾರಿ ಪ್ರಸಂಗ ಎದುರಾಗಿದೆ.

ತಾಲೂಕಿನ ಗರಗಂದೂರು ಗ್ರಾಮದ ನಿವಾಸಿ ಮಹಮ್ಮದ್ ಅವರು ತಮ್ಮ ಜಾಗದ ಪೋಡಿಗಾಗಿ ತಾಲೂಕು ಕಚೇರಿಗೆ ಅಲೆದಲೆದು ಸುಸ್ತಾಗಿದ್ದು, ಇದೀಗ ಜಾಗದ ದಾಖಲೆಗಳನ್ನು ಕೊಡಿ;ತಪ್ಪಿದ್ದಲ್ಲಿ ತಾಲೂಕು ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಅದಕ್ಕಾದರೂ ಅವಕಾಶ ನೀಡಿ ಎಂದು ದಯನೀಯವಾಗಿ ಬೇಡಿಕೊಂಡು, ಈ ಸಂಬಂಧಿತ ಮನವಿಯನ್ನು ತಹಶೀಲ್ದಾರ್‍ಗೆ ಸಲ್ಲಿಸಿದ್ದಾರೆ.

ಗರಗಂದೂರು ಗ್ರಾಮದ ಸ.ನಂ. 39/20ರಲ್ಲಿ 65 ಸೆಂಟ್ಸ್ ಜಾಗವಿದ್ದು, ಇದರಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ಮಹಮ್ಮದ್ ಅವರು, ಉಳಿದ ಜಾಗದಲ್ಲಿ ತೆಂಗು, ಬಾಳೆ, ಕರಿಮೆಣಸು ಬೇಸಾಯ ಮಾಡಿಕೊಂಡಿದ್ದಾರೆ. ಇರುವ ಒಬ್ಬ ಮಗ ಹೊರ ರಾಜ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ನನ್ನ ಕುಟುಂಬದ ಜಾಗದ ಪೋಡಿ ದಾಖಲೆಗಾಗಿ ಕಳೆದ 10 ವರ್ಷಗಳಿಂದ ತಾಲೂಕು ಕಚೇರಿ, ನಾಡ ಕಚೇರಿ ಹಾಗೂ ಸರ್ವೆ ಕಚೇರಿಗೆ ಅಲೆದಾಟ ನಡೆಸುತ್ತಲೇ ಇದ್ದೇನೆ. ಆದರೆ ನನ್ನ ಅರ್ಜಿಗಳೇ ಕಾಣೆಯಾಗುತ್ತಿವೆ. ಈ ಬಗ್ಗೆ ಹಿಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೂ ಮನವಿ ಮಾಡಿದ್ದೆ. ಪರಿಣಾಮ ಭೂ ಮಾಪನ ದಾಖಲೆಯಲ್ಲಿ ನಕಾಶೆ ದಾಖಲಿಸಲು ಆದೇಶ ನೀಡಿದ್ದರು ಎಂದು ಮಹಮ್ಮದ್ ತಿಳಿಸಿದ್ದಾರೆ.

ತಾನೂ ಸೇರಿದಂತೆ ಇತರ 15 ಮಂದಿಯ ಕಡತ ಸಿದ್ದಪಡಿಸಿದ ನಂತರ(ಟಿಎಸ್‍ಟಿ/ಎಂ.ಸಿ.31/2014-15) ತಾಲೂಕು ಕಚೇರಿಯ ಈರ್ವರು ಗುಮಾಸ್ಥರು 16 ಮಂದಿಗೆ ಸಂಬಂಧಿಸಿದ ಕಡತವನ್ನು ಕಡೆಗಣಿಸಿ ಕೇವಲ ಓರ್ವ ವ್ಯಕ್ತಿಗೆ (ಏಕವ್ಯಕ್ತಿ ಪ್ರಕರಣ) ಮಾತ್ರ ದಾಖಲೆ ಮಾಡಿ ಕೊಟ್ಟಿದ್ದಾರೆ. ಇತರ 15 ಮಂದಿಯ ಕಡತ ನಾಪತ್ತೆ ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಗರಗಂದೂರು ಹೊರತುಪಡಿಸಿ ಉಳಿದ ಗ್ರಾಮಗಳ ಕಡತಗಳಿವೆ. ಇದರೊಂದಿಗೆ ಗರಗಂದೂರಿನ 1 ರಿಂದ 5 ಪುಸ್ತಕ ದಾಖಲೆ ಸಹ ನಾಪತ್ತೆಯಾಗಿದೆ. ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದಾರೆ ಎಂದು ಮಹಮ್ಮದ್ ಅಸಹಾಯಕತೆ ವ್ಯಕ್ತಪಡಿಸಿದರು.

ಹಣಕಾಸಿಕ ಕೊರತೆ ಮತ್ತು ವೃದ್ಧಾಪ್ಯದಿಂದ ಬಳಲುತ್ತಿರುವ ತನಗೆ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲವೆಂದಾದರೆ ತಾಲೂಕು ಕಚೇರಿಯ ಎದುರೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ಮಹಮ್ಮದ್ ಅವರು ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಮಾಡಿದರು.

ತಕ್ಷಣ ತಮ್ಮ ಕಚೇರಿಗೆ ತಾಲೂಕು ಕಚೇರಿಯ ಎಂ.ಸಿ. ಸಿಬ್ಬಂದಿಯನ್ನು ಕರೆಸಿಕೊಂಡ ತಹಶೀಲ್ದಾರ್‍ರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದಾಖಲೆಗಳನ್ನು ಒದಗಿಸಿಕೊಡುವಂತೆ ನಿರ್ದೇಶನ ನೀಡಿದರು.