ಸೋಮವಾರಪೇಟೆ, ಮಾ. 14: ಹಾಕಿ ಕ್ರೀಡಾಪಟುಗಳ ನೆಲವಾದ ಸೋಮವಾರಪೇಟೆ, ದೇಶದ ಹಾಕಿ ತಂಡಕ್ಕೆ ಹಲವಷ್ಟು ಆಟಗಾರರೂ ಸೇರಿದಂತೆ ನಾಯಕ ಸ್ಥಾನವನ್ನು ನೀಡಿದೆ. ಇಂತಹ ಕೀರ್ತಿ ಹೊಂದಿರುವ ಸೋಮವಾರಪೇಟೆಯ ಆಟಗಾರನೋರ್ವ ಇದೀಗ ಭಾರತ ಜೂನಿಯರ್ ಹಾಕಿ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗುವ ಮೂಲಕ ದೇಶದ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದಾನೆ.
ಪಟ್ಟಣದ ಮಹದೇಶ್ವರ ಬಡಾವಣೆಯ ಮೋಹನ್ ಮತ್ತು ಶೋಭಾ ದಂಪತಿ ಪುತ್ರ, ಸೂರ್ಯ ತನ್ನ ಅಪ್ರತಿಮ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದು, ರಾಜ್ಯದ ಭರವಸೆಯ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದಾನೆ.
ಬಾಲ್ಯದಿಂದಲೇ ಅಥ್ಲೇಟ್ ಮತ್ತು ಹಾಕಿ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಸೂರ್ಯ ನಂತರ ದಿನಗಳಲ್ಲಿ ಪೊನ್ನಂಪೇಟೆಯ ಕ್ರೀಡಾ ಶಾಲೆಗೆ ಆಯ್ಕೆಯಾಗಿ ಪ್ರಸ್ತುತ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದಾನೆ.
ಇಲ್ಲಿನ ಜ್ಞಾನವಿಕಾಸ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಪೊನ್ನಂಪೇಟೆಯ ಕ್ರೀಡಾ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದ ಸೂರ್ಯ, ಪ್ರಥಮ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಕ್ರೀಡಾ ಪ್ರಾಧಿಕಾರಿದ ವಸತಿ ಶಾಲೆಗೆ ದಾಖಲಾಗಿದ್ದ. ಇದೀಗ ಬೆಂಗಳೂರಿನ ಸೆಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.
ಸೋಮವಾರಪೇಟೆಯಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹದೊಂದಿಗೆ ಕ್ರೀಡಾಪಟುಗಳಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಾ ಬರುತ್ತಿರುವ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ನ ತರಬೇತಿ ಶಿಬಿರದ ಮೂಲಕ ತನ್ನ ಹಾಕಿ ಪ್ರತಿಭೆಯನ್ನು ಓರೆಗೆ ಹಚ್ಚಿದ ಸೂರ್ಯ, ನಂತರದ ದಿನಗಳಲ್ಲಿ ಹಂತಹಂತವಾಗಿ ಮೇರುತ್ತಾ ಬಂದು ಇದೀಗ ಭಾರತ ಜೂನಿಯರ್ ಹಾಕಿ ತಂಡದ ತರಬೇತಿ ಶಿಬಿರದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.
ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ನ ಅಧ್ಯಕ್ಷ ಹೆಚ್.ಎನ್. ಅಶೋಕ್ ಮತ್ತು ಅಭಿಷೇಕ್ ಗೋವಿಂದಪ್ಪ ಅವರುಗಳ ಮಾರ್ಗದರ್ಶನ, ಪ್ರೋತ್ಸಾಹ, ತರಬೇತಿಯಿಂದ ಹಾಕಿ ಕ್ಷೇತ್ರದಲ್ಲಿ ಇನ್ನಷ್ಟು ಪಕ್ವಗೊಂಡ ಸೂರ್ಯ ಪೊನ್ನಂಪೇಟೆ ಕ್ರೀಡಾ ಶಾಲೆಗೆ ಸೇರ್ಪಡೆಗೊಂಡ ನಂತರ ಅಲ್ಲಿನ ತರಬೇತುದಾರ ಡ್ಯಾನಿ ಈರಪ್ಪ, ಸುಬ್ಬಯ್ಯ, ವಾರ್ಡನ್ ನರೇಂದ್ರ ಗರಡಿಯಲ್ಲಿ ಪಳಗಿ, ಅಂತರ್ರಾಷ್ಟ್ರೀಯ ಹಾಕಿ ಆಟಗಾರರಾದ ಬಿ.ಎ. ಚಂಗಪ್ಪ, ವಿಕ್ರಂಕಾಂತ್ ಮಾರ್ಗದರ್ಶನದಡಿ ಇದೀಗ ಭರವಸೆಯ ಆಟಗಾರನಾಗಿ ಹೊರ ಹೊಮ್ಮಿದ್ದಾನೆ.
ಈಗಾಗಲೇ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆದ 62ನೇ ರಾಷ್ಟ್ರಮಟ್ಟದ ಅಂತರ್ ಪ್ರೌಢಶಾಲಾ ಕ್ರೀಡಾಕೂಟ, ಮಣಿಪುರದಲ್ಲಿ ನಡೆದ 6ನೇ ಸಬ್ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟ, 2017ರಲ್ಲಿ ಹಾಕಿ ಇಂಡಿಯಾ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದಾನೆ. ಇದರೊಂದಿಗೆ ಭೂಪಾಲ್ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಕಂಚಿನ ಪದಕ, 2015ರಲ್ಲಿ ನಡೆದ ರಾಜ್ಯಮಟ್ಟದ ರಾಜೀವ್ಗಾಂಧಿ ಖೇಲ್ ರತ್ನ ಪಂದ್ಯಾವಳಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.
ರಾಜ್ಯಮಟ್ಟದ ಅಂತರ್ ಶಾಲಾ ಬಾಲಕರ ಹಾಕಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 2016ರಲ್ಲಿ ರಾಜ್ಯಮಟ್ಟದ ಅಂತರ್ ಶಾಲಾ ಬಾಲಕರ ಟೂರ್ನಿಯಲ್ಲಿ ದ್ವಿತೀಯ ಸ್ಥಾನ, ಹಾಕಿ ಕೂರ್ಗ್ ನಡೆಸಿದ ಜಿಲ್ಲಾ ಮಟ್ಟದ ಅಂತರ್ ಪ್ರೌಢಶಾಲಾ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, ಕಂಡಂಗಾಲದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವದರೊಂದಿಗೆ ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಎಂಬ ಪ್ರಶಸ್ತಿಗೂ ಭಾಜನವಾಗಿ, ಸಾಧನೆ ತೋರಿದ್ದಾನೆ.
ಇಲ್ಲಿನ ಮಾರ್ಕೆಟ್ ಏರಿಯಾದಲ್ಲಿ ವೆಲ್ಡಿಂಗ್ ಶಾಪ್ ನಡೆಸುತ್ತಿರುವ ತಂದೆ ಮೋಹನ್ ಮತ್ತು ಅವರ ಸಹೋದರರ ನಿರಂತರ ಪ್ರೋತ್ಸಾಹದೊಂದಿಗೆ ಹಾಕಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಸೂರ್ಯ, ‘ಶಕ್ತಿ’ಯೊಂದಿಗೆ ಮಾತನಾಡಿ, ಜೂನಿಯರ್ ಹಾಕಿ ತರಬೇತಿ ಶಿಬಿರದಲ್ಲಿ ಸ್ಥಾನ ಲಭಿಸಿರುವದು ಸಂತಸ ತಂದಿದೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಗುರಿ ಹೊಂದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾನೆ.
ದೇಶದ ಹಾಕಿ ಕ್ಷೇತ್ರಕ್ಕೆ ಬಿ.ಪಿ. ಗೋವಿಂದ, ಅರ್ಜುನ್ ಹಾಲಪ್ಪ, ಎಸ್.ವಿ. ಸುನಿಲ್, ವಿಕ್ರಂ ಕಾಂತ್ ಅವರಂತಹ ಅಂತರಾಷ್ಟ್ರೀಯ ಹಾಕಿ ಪಟುಗಳನ್ನು ನೀಡಿದ ಸೋಮವಾರಪೇಟೆಯಿಂದ ಇದೀಗ ಮತ್ತೋರ್ವ ಆಟಗಾರ ದೇಶದ ತಂಡದಲ್ಲಿ ಸ್ಥಾನ ಗಳಿಸುವ ಭರವಸೆ ಮೂಡಿಸಿದ್ದಾನೆ.
- ವಿಜಯ್ ಹಾನಗಲ್