ಸೋಮವಾರಪೇಟೆ, ಮಾ. 13: ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಕದಳಿ ವೇದಿಕೆ,ಶಿರಂಗಾಲ ಗ್ರಾ.ಪಂ., ಶ್ರೀಮಂಟಿಗಮ್ಮ-ಉಮಾಮಹೇಶ್ವರ ದೇವಾಲಯ ಸಮಿತಿ, ಅಕ್ಕಮಹಾದೇವಿ ಮಹಿಳಾ ಸಮಾಜ, ಕುಶಾಲನಗರದ ಅಕ್ಕನ ಬಳಗ ಇವುಗಳ ಆಶ್ರಯದಲ್ಲಿ, ಶಿರಂಗಾಲಲ್ಲಿ ಆಯೋಜನೆಗೊಂಡಿದ್ದ ‘ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ’ ಚಿಂತನಾಗೋಷ್ಠಿ ಕಾರ್ಯಕ್ರಮ ಸ್ತ್ರೀ ಸಂವೇದನೆಯನ್ನು ಜಾಗೃತಗೊಳಿಸುವಲ್ಲಿ ಯಶಸ್ಸು ಕಂಡಿತು.
ಇದರೊಂದಿಗೆ ‘ಲಿಂಗ ಸಮಾನತೆ ಮತ್ತು ಸೂತಕಗಳನ್ನು ಸುಳ್ಳು ಮಾಡಿದ ವಚನಕ್ರಾಂತಿ’ ಹಾಗೂ ‘ವೈಚಾರಿಕ ದಾಂಪತ್ಯಕ್ಕೆ ಅಡಿಪಾಯ ಹಾಕಿದ ಶರಣ ಕ್ರಾಂತಿ’ ವಿಷಯಗಳ ಬಗ್ಗೆ ವಿಚಾರವಂತರು ಮಂಡಿಸಿದ ವಿಚಾರಧಾರೆಗಳು ವಿಮರ್ಶೆಗೆ ತಳಹದಿಯಾದವು.
ಸೂದನ ರತ್ನಾವತಿ ಪೂಣಚ್ಚ ಅವರು ವಿಚಾರ ಮಂಡಿಸಿ, ಸ್ತ್ರೀಯರು ಪುರಷರಷ್ಟೇ ಸಮರ್ಥರು. ಎಲ್ಲಾ ಕೆಲಸಗಳನ್ನೂ ಪುರಷರಿಗೆ ಸರಿಸಮಾನರಾಗಿ ಮಾಡಬಲ್ಲರು. ಇಂದು ಯಾವದೇ ಕ್ಷೇತ್ರದ ಸಾಧಕಿಯರನ್ನು ನೋಡಿದರೂ ಅವರಲ್ಲಿ ಹೆಚ್ಚಿನವರು ಮಹಿಳಾ ಮೀಸಲಾತಿಯ ಲಾಭ ಪಡೆಯದೇ ಮೇಲೆ ಬಂದವರಾಗಿದ್ದಾರೆ ಎಂದರು.
ಇಂದು ಸ್ತ್ರೀಶಕ್ತಿ ಸಂಘಗಳು ಲೇವಾದೇವಿ ಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಬದಲಾದ ಕಾಲಮಾನದಲ್ಲಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದ್ದು, ಕುಟುಂಬಗಳು ಸರಿ ದಾರಿಯಲ್ಲಿ ಸಾಗಲು ಸ್ತ್ರೀಶಕ್ತಿ ಸಂಘಗಳಂತಹ ಸಂಘಟನೆಗಳು ಬೇಕಿವೆ. ಆದರೆ ಮೂಲ ಉದ್ದೇಶಗಳು ಬದಲಾಗಬಾರದು ಎಂದು ಅಭಿಪ್ರಾಯಪಟ್ಟರು.
ಸೂತಕ ಎನ್ನುವದು ಮೂಢನಂಬಿಕೆ. ಇಂತಹ ಮೌಢ್ಯಗಳಿಂದ ಅಪಾಯವೇ ಹೆಚ್ಚು. ಸೂತಕದ ಆಚರಣೆಗಳ ಹೊಡೆತಕ್ಕೆ ಅತ್ಯಧಿಕವಾಗಿ ತುತ್ತಾಗುತ್ತಿರುವದು ಮಹಿಳೆಯೇ ಆಗಿದ್ದಾಳೆ. ಸೂತಕದ ಹೆಸರಿನಲ್ಲಿ ಮಹಿಳೆಯನ್ನು ಶೋಷಣೆ ಮಾಡಲಾಗುತ್ತದೆ. ಪ್ರೌಢಾವಸ್ಥೆ ಪ್ರವೇಶದ ಸಂದರ್ಭದಲ್ಲಿ ನಡೆಸುವ ವಿಪರೀತ ಎನ್ನುವ ಆಚರಣೆಗಳಿಗಿಂತ ಆಕೆಗೆ ಸ್ವಚ್ಛ ಮತ್ತು ಆರೋಗ್ಯವಂತ ಬದುಕಿನ ಮಾರ್ಗದರ್ಶನ ನೀಡಬೇಕಿದೆ ಎಂದರು.
ದೇಶದಲ್ಲಿ ಹೆಚ್ಚುತ್ತಿರುವ ಲಿಂಗಾನುಪಾತ ಆತಂಕ ಹುಟ್ಟಿಸುವಂತಿದೆ. ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ. ಹೆಣ್ಣುಗಂಡುಗಳ ಮಧ್ಯೆ ಇರುವ ಸಂಬಂಧ ಭಾವನಾತ್ಮಕವಾಗಿದ್ದು ಇದಕ್ಕೆ ಶಾಸನಗಳ ಮೂಲಕ ಬೆಸುಗೆ ಹಾಕುವದು ಸಾಧ್ಯವಿಲ್ಲ. 12 ಶತಮಾನದಲ್ಲಿ ಬಸವವಾದಿ ಶರಣರು ನಡೆಸಿದ ಲಿಂಗ ಸಮಾನತೆಯ ಕ್ರಾಂತಿ ಇಂದು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವದನ್ನು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.
ಕೊಟ್ಟಕೇರಿಯನ ಲೀಲಾ ದಯಾನಂದ್ ಮಾತನಾಡಿ, ಶರಣರ ವಚನಗಳು ಅಂತರಂಗದ ಬೆಳಕು. ಸಾಮಾನ್ಯವಾಗಿ ಗೃಹಸ್ಥರೇ ಆಗಿದ್ದ ಶರಣರೆಲ್ಲರೂ ದಾಂಪತ್ಯ ಜೀವನವನ್ನು ಪ್ರತಿಪಾದಿಸಿದ್ದರು. ಇಂದ್ರೀಯ ನಿಗ್ರಹವು ದೇಹ ಸ್ವಾಸ್ಥ್ಯಕ್ಕೆ, ದೇವ ಧರ್ಮಕ್ಕೆ ವಿರುದ್ಧವಾದುದು ಎಂಬದು ವಚನಕಾರರÀ ಅಭಿಪ್ರಾಯವಾಗಿತ್ತು. ಸಮಾಜವೆಂಬ ರಥಕ್ಕೆ ಸತಿ-ಪತಿಗಳಿಬ್ಬರೂ ಅತ್ಯಗತ್ಯ ಗಾಲಿಗಳೆಂಬುದನ್ನು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ಕುಶಾಲನಗರ ಅಕ್ಕನ ಬಳಗದ ಅಧ್ಯಕ್ಷೆ ಕಮಲ ಉದಯಕುಮಾರ್, ಶಿರಂಗಾಲ ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ, ಸೋಮವಾರಪೇಟೆ ಪ.ಪಂ. ಸದಸ್ಯೆ ಶೀಲಾ ಡಿಸೋಜಾ, ಶಿರಂಗಾಲ ಅಕ್ಕಮಹಾದೇವಿ ಮಹಿಳಾ ಸಮಾಜ ಕಾರ್ಯದರ್ಶಿ ರೇಣುಕಾ ರವಿ, ಸೋಮವಾರಪೇಟೆ ತಾ.ಪಂ. ಮಾಜಿ ಸದಸ್ಯೆ ಮಮತಾ ಸತೀಶ್, ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ವಿರಾಜಪೇಟೆ ತಾಲೂಕು ಕದಳಿ ವೇದಿಕೆ ಕಾರ್ಯದರ್ಶಿ ಸುರಭಿ ಪ್ರಸಾದ್, ಸೋಮವಾರಪೇಟೆ ಪ.ಪಂ. ಸದಸ್ಯೆ ನಳಿನಿ ಗಣೇಶ್, ಸೋಮವಾರಪೇಟೆ ಪ.ಪಂ. ಮಾಜಿ ಅಧ್ಯಕ್ಷೆ ಲೀಲಾ ನಿರ್ವಾಣಿ ಹಾಗೂ ಕಾಫಿ ಬೆಳೆಗಾರರಾದ ರಾಜೇಶ್ವರಿ ನಾಗರಾಜ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.