ಮಹಿಳಾ ದಿನಾಚರಣೆ

ವೀರಾಜಪೇಟೆ, ಮಾ. 12: ಮಹಿಳೆಯರ ಸಬಲೀಕರಣ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿ ರುವದು ಮಹಿಳಾ ವರ್ಗಕ್ಕೆ ಸಂತಸದ ತಂದಿದೆ. ತಾಲೂಕಿನ ಮೂಲೆ ಮೂಲೆಗಳಲ್ಲೂ ಮಹಿಳಾ ಸಂಘಟನೆಗಳು ಬೆಳವಣಿಗೆಯನ್ನು ಕಾಣುತ್ತಿವೆ. ಇಂದಿನ ಸಮಾಜದಲ್ಲಿ ಮಹಿಳೆಯರು ಸಂಘಟನೆಗಳ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.

ಸಮುಚ್ಚಯ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದ ರಮಾ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಪ್ರಭುತ್ವವನ್ನು ಸಾಧಿಸಬೇಕು. ಆದಷ್ಟು ಸ್ವಾವಲಂಬನೆಯತ್ತ ಸಾಗುವದರಿಂದ ಪುರುಷರ ಶೋಷಣೆಯಿಂದ ದೂರವಿರಲು ಸಾಧ್ಯವಾಗಲಿದೆ. ಒಮ್ಮತದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಮೂಲಕ ಪುರುಷರಂತೆ ಸಮಾನತೆಯನ್ನು ಸಾಧಿಸಬೇಕು ಎಂದರು. ವಕೀಲೆ ಅನುಪಮ ಬಿ. ಕಿಶೋರ್ ಉಪನ್ಯಾಸ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಜಡ್ಜ್ ನ್ಯಾಯಾಲಯದ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಒಮ್ಮತ ಹಾಗೂ ಸಂಘಟನೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ದುಡಿಯುತ್ತಿದ್ದಾರೆ. ಮಹಿಳೆಯರ ಒಗ್ಗಟ್ಟು ಪ್ರಗತಿಯತ್ತ ಸಾಗಲು ಕಾರಣವಾಗಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರುಗಳಿಗೆ ಬಹುಮಾನ ವಿತರಿಸಲಾಯಿತು.