ಸೋಮವಾರಪೇಟೆ, ಮಾ. 12: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ, ಪಶ್ಚಿಮಘಟ್ಟ ಪ್ರದೇಶ ಪುಷ್ಪಗಿರಿ ಬೆಟ್ಟ ತಪ್ಪಲಲ್ಲಿ ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ಪ್ರೇಕ್ಷಣೀಯ ಸ್ಥಳವಾಗಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಇಂತಹ ಆಕರ್ಷ ಣೀಯ ಸ್ಥಳದಲ್ಲಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿದ್ದು, ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮಲ್ಲಳ್ಳಿ ಜಲಪಾತಕ್ಕೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಹೀಗೆ ಬಂದವರಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವದು ಆತಂಕಕಾರಿಯಾಗಿದೆ. ಈವರೆಗೆ ಅನೇಕ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಮತ್ತೆ ಮತ್ತೆ ಸಾವುಗಳು ಸಂಭವಿಸುತ್ತಲೇ ಇವೆ.
ಹೊರ ಭಾಗದಿಂದ ಆಗಮಿಸುವ ಹಲವಷ್ಟು ಮಂದಿ ಇಲ್ಲಿ ಮೋಜು, ಮಸ್ತಿಯ ಗುಂಗಿನಲ್ಲಿ ನೀರಿಗಿಳಿದು ಹುಚ್ಚು ಸಾಹಸ ತೋರುವ ಮೂಲಕ ನೀರಿನಲ್ಲಿ ಪ್ರಾಣತ್ಯಾಗ ಮಾಡುತ್ತಿದ್ದಾರೆ. ಇತ್ತೀಚೆಗೆ ಜಲಪಾತದೆದುರು ಮೆಶ್ ಅಳವಡಿಸಿ ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ಸವಿಯಲು ತಡೆಯೊಡ್ಡ ಲಾಗಿದ್ದರೂ ಸಹ, ಎಚ್ಚರಿಕೆಯನ್ನೂ ನಿರ್ಲಕ್ಷಿಸಿ, ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿರುವದು ದುರಂತ.
ಜಲಪಾತದ ಬಳಿ ಇರುವ ರಕ್ಷಣಾ ಸಿಬ್ಬಂದಿಗಳ ಅಸಡ್ಡೆ, ಕೇವಲ ಟೆಂಡರ್ ಮೂಲಕ ಹಣ ಗಳಿಸುವ ಆಸಕ್ತಿ ಹೊಂದಿರುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯವೈಖರಿ ಒಂದೆಡೆಯಾದರೆ, ಸೂಕ್ತ ರಕ್ಷಣಾ ವ್ಯವಸ್ಥೆ, ದೂರ ಸಂಪರ್ಕ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸದ ಜಿಲ್ಲಾಡಳಿತ ಹಾಗೂ ಪ್ರವಾಸೋಧ್ಯಮ ಇಲಾಖೆಯ ದಿವ್ಯನಿರ್ಲಕ್ಷ್ಯದಿಂದಾಗಿ ಜಲಪಾತದಲ್ಲಿ ಸಾವಿನ ಸರಣಿ ಮುಂದುವರೆದಿದೆ.
ಈಗಾಗಲೇ ಜಲಪಾತದಲ್ಲಿ 14 ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಲವು ಸಲಹೆಗಳನ್ನು ನೀಡಿದ್ದರೂ, ಅವುಗಳನ್ನು ಜಾರಿಗೊಳಿಸುವಲ್ಲಿ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿರುವದರಿಂದ ಇಲ್ಲಿ ಜೀವಕ್ಕೆ ಬೆಲೆ ಇಲ್ಲದಂತಾಗಿದೆ.
ಪ್ರವಾಸಿಗರು ಜಲಪಾತಕ್ಕೆ ಬಂದ ಸಂದರ್ಭ ಅಪಘಾತಗಳೂ ಸಂಭವಿಸಿದರೆ, ತಕ್ಷಣ ಸಂಪರ್ಕಿಸಲು ದೂರವಾಣಿ ಸಂಪರ್ಕ ಇಲ್ಲದಿರುವ ದರಿಂದ ಸ್ಥಳದಲ್ಲಿ ಬಿಎಸ್‍ಎನ್‍ಎಲ್ ಅಥವಾ ಖಾಸಗಿ ಟವರ್ ನಿರ್ಮಿಸಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಇದಕ್ಕೆ ಸ್ಪಂದನೆ ಸಿಕ್ಕಿಲ್ಲ. ಪುಷ್ಪಗಿರಿ ಹಾಗೂ ಮಲ್ಲಳ್ಳಿ ರಸ್ತೆ ಸೇರುವಲ್ಲಿ ಚೆಕ್ ಪೋಸ್ಟ್ ನಿರ್ಮಿಸುವದು. ಪ್ರವಾಸಿಗರ ಆಗಮನ ಹಾಗೂ ನಿರ್ಗಮನ ವಿವರಗಳನ್ನು ನಮೂದಿಸುವದು. ಜಲಪಾತದ ತಳಭಾಗದಿಂದ ಮೇಲಕ್ಕೆ ಒಂದು ವೀಕ್ಷಣಾ ಗೋಪುರ ನಿರ್ಮಿಸುವದು. ಕೆಳ ಭಾಗಕ್ಕೆ ಪ್ರವಾಸಿಗರು ಹೋದರೂ ಸಹ ನೀರಿಗೆ ಇಳಿಯಲು ಸಾಧ್ಯವಾಗದಂತೆ ರಕ್ಷಣಾ ಬೇಲಿಯನ್ನು ಇನ್ನಷ್ಟು ಕಠಿಣಗೊಳಿಸುವದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಂಬಂಧಿಸಿದವರು ಯಾವದೇ ಚಿಂತನೆ ನಡೆಸಿಲ್ಲ.
ಇತ್ತೀಚೆಗೆ ಜಲಪಾತದ ಮೇಲ್ಬಾಗಕ್ಕೂ ಪ್ರವಾಸಿಗರು ತೆರಳುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇರುವದರಿಂದ ಅಲ್ಲಿಯೂ ಸಹ ಕಬ್ಬಿಣದ ಬೇಲಿ ನಿರ್ಮಿಸುವದು. ಪುಷ್ಪಗಿರಿ ಸುತ್ತಮುತ್ತಲಲ್ಲಿ ನಕ್ಸಲರು ನುಸುಳುವ ಸಾಧ್ಯತೆ ಇರುವದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮಲ್ಲಳ್ಳಿ ಜಲಪಾತದ ಬಳಿ ಪೊಲೀಸ್ ಉಪಠಾಣೆ ಪ್ರಾರಂಭಿಸುವದು ಮತ್ತು ಶೀಘ್ರ ಸಂಪರ್ಕಕ್ಕಾಗಿ ವಯರ್‍ಲೆಸ್ ಟವರ್ ಅಳವಡಿಸುವದರೊಂದಿಗೆ ಚೆಕ್ ಪೋಸ್ಟ್ ಹಾಗೂ ಜಲಪಾತದ ಬಳಿ ಸಿ.ಸಿ. ಕ್ಯಾಮೆರ ಅಳವಡಿಸಿದರೆ ಮುಂದೆ ನಡೆಯಬಹುದಾದ ಸಾವು ನೋವುಗಳನ್ನು ತಡೆಯಬಹುದಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಗಮನ ಹರಿಸಬೇಕಿದೆ.