ಶಾಸಕ ಕೆ.ಜಿ. ಬೋಪಯ್ಯ
ವೀರಾಜಪೇಟೆ, ಮಾ. 12: ದೇಶ ಅಭಿವೃದ್ಧಿ ಹೊಂದಲು ಹಾಗೂ ಹೊಗೆ ಮುಕ್ತ ದೇಶವನ್ನಾಗಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆಯಿಂದ ದೇಶದ 16 ಕೋಟಿ ಬಡ ಕುಟುಂಬಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಕಾರ್ಯಕ್ರಮವನ್ನು ಹಮ್ಮಿ ಕೊಂಡಿರುವದಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕೇಂದ್ರ ಸರ್ಕಾರದ ಉಜ್ವಲ್ ಯೋಜನೆ ವತಿಯಿಂದ ವೀರಾಜಪೇಟೆ ಸಮೀಪದ ತೋರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ 24 ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೋಪಯ್ಯ ಅವರು ಮಾತನಾಡಿ ದೇಶವನ್ನು ಸುಭದ್ರಗೊಳಿಸಲು ಪ್ರತಿಯೊಬ್ಬ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ನೀಡುತ್ತಿದ್ದು, ಇದನ್ನು ಪಡೆದುಕೊಂಡವರು ಏಜೆಂಟ್‍ಗಳಿಂದ ಮಾಹಿತಿ ಪಡೆದುಕೊಳ್ಳಬೇಕು, ಜಾಗೃತೆಯಿಂದ ಬಳಸಿಕೊಳ್ಳುವಂತಾಗಬೇಕು ಎಂದರು. ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಹಿಂದೆ ಹೆಗ್ಗಳ-ತೋರ ಗ್ರಾಮ ಕುಗ್ರಾಮವಾಗಿತ್ತು ಕೆಲವು ವರ್ಷಗಳಿಂದ ರಸ್ತೆ,ಬಸ್ ಸೌಲಭ್ಯ, ಹಾಗೂ ಸರಕಾರದ ಸೌಲಭ್ಯಗಳು ದೊರಕುತ್ತಿದ್ದು. ಈ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಗ್ಯಾಸ್ ವಿತರಣೆಯಿಂದ ಬಡ ಕುಟುಂಬಗಳಿಗೆ ಅನುಕೂಲವಾಗಿದ್ದು ಇನ್ನು ಹೆಚ್ಚು ಜನರಿಗೆ ಸೌಲಭ್ಯಗಳು ದೊರಕುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಬಿ.ಎಂ. ಗಣೇಶ್, ಬಿ.ಜೆ.ಪಿ. ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಮನು ರಾಮಚಂದ್ರ, ಜೋಕಿಂ ರಾಡ್ರಿಗಾಸ್, ಗ್ಯಾಸ್ ಏಜೆನ್ಸಿ ವಿಷ್ಣು, ಪ.ಪಂ. ಸದಸ್ಯ ಸುಭಾಶ್ ಮಹಾದೇವ, ಬೇಟೋಳಿ ಗ್ರಾ.ಪಂ. ಸದಸ್ಯರಾದ ಲೀಲಾ, ಬೋಪಣ್ಣ, ಸರಸ್ವತಿ, ಗ್ರಾಮಸ್ಥ ವಿಜಯ್ ಮುಂತಾದವರು ಉಪಸ್ಥಿತರಿದ್ದರು.