ಮಡಿಕೇರಿ, ಮಾ. 12: ಕೊಡಗು ಜೆಡಿಎಸ್ ಅಧ್ಯಕ್ಷರಾಗಿ ಘೋಷಿಸಿ ರುವ ಕೆ.ಎಂ. ಗಣೇಶ್ ಅವರ ನೇಮ ಕಾತಿಯನ್ನು ಬದಲಾವಣೆ ಮಾಡುವ ದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಚಿವ ಬಿ.ಎ. ಜೀವಿಜಯ ಹೇಳಿದ್ದಾರೆ.ಜೆಡಿಎಸ್ ಜಿಲ್ಲಾಧ್ಯಕ್ಷ ರಾಗಿ ಕೆ.ಎಂ. ಗಣೇಶ್ ಅವರನ್ನು ಆಯ್ಕೆ ಮಾಡಿರುವ ಸಂಬಂಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುವ ದಾಗಿ ಹೇಳಿದ್ದ ಜೀವಿಜಯ ಅವರು ಇಂದು ಕರೆದಿದ್ದ ಪತ್ರಿಕಾಗೋಷ್ಠಿ ನಡೆಸದೆ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದರು. ಜೆಡಿಎಸ್ ವರಿಷ್ಠ ದೇವೇಗೌಡ ಅವರು ಬೇರೊಬ್ಬರ ಬಳಿ ದೂರವಾಣಿಯಲ್ಲಿ ಮಾತನಾಡಿ, ಹಾಲಿ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡುವದಾಗಿ ಭರವಸೆ ನೀಡಿರುವ ಬಗ್ಗೆ ತನಗೆ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಮುಂದುವರೆಯುವದಾಗಿ ತಿಳಿಸಿದರು.ತಾನು ತನ್ನ ಮಗನಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಎಂದು ಹೇಳುತ್ತಿಲ್ಲ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಹಲವಾರು ಮಂದಿ ಇದ್ದಾರೆ. ಅವರಲ್ಲಿ ಯಾರಿಗಾದರೂ ಅಧ್ಯಕ್ಷ ಸ್ಥಾನ ನೀಡಿ ಎಂಬದಷ್ಟೆ ತನ್ನ ಬೇಡಿಕೆ ಎಂದರು.

ನಿನ್ನೆ ಮೊನ್ನೆ ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಬಿಜೆಪಿಯ ಏಜೆಂಟ್ ಆಗಿ ಬಂದು ಸೇರಿಕೊಂಡವರು ಜೆಡಿಎಸ್ ಅಧ್ಯಕ್ಷರಾದರೆ ಕಾರ್ಯಕರ್ತರು ಸಹಿಸುವದಿಲ್ಲ ಎಂದು ಜೀವಿಜಯ ಹೊಸ ಅಧ್ಯಕ್ಷರ ಬಗ್ಗೆ ಅಸಮಾಧಾನ ಹೊರಗೆಡವಿದರು.

(ಮೊದಲ ಪುಟದಿಂದ)

ಅಭಿಪ್ರಾಯ ಸಂಗ್ರಹಕ್ಕೆ ಆಗ್ರಹ

ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಹಾಗೂ ಪ್ರಾಮಾಣಿಕ ಮುಖಂಡರನ್ನು ಕಡೆಗಣಿಸಿ ಕೆ.ಎಂ.ಗಣೇಶ್ ಅವರಿಗೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿರುವ ಕ್ರಮವನ್ನು ಖಂಡಿಸುವದಾಗಿ ಜೆಡಿಎಸ್ ಮಾಜಿ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕೆ.ಎಂ.ಗಣೇಶ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿರುವ ಬಗ್ಗೆ ಜೆಡಿಎಸ್‍ನ ಪ್ರಾಮಾಣಿಕ ಕಾರ್ಯಕರ್ತರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಯಾರೂ ಕೂಡ ಗಣೇಶ್ ಅವರ ನಾಯಕತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ನಾಯಕರನ್ನು ಆಯ್ಕೆ ಮಾಡುವಂತೆ ಈ ಹಿಂದೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರೊಂದಿಗೆ ಜೀವಿಜಯ ಅವರು ಚರ್ಚಿಸಿದ್ದರು. ಈ ಮನವಿಗೆ ರಾಷ್ಟ್ರಾಧ್ಯಕ್ಷರು ಕೂಡ ಸೂಕ್ತ ಭರವಸೆಯನ್ನು ನೀಡಿದ್ದರು. ಆದರೆ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ಏಕಾಏಕಿ ಗಣೇಶ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾಜೇಶ್ ಯಲ್ಲಪ್ಪ ದೂರಿದರು.

ಕೊಡಗು ಜಿಲ್ಲೆಯಲ್ಲಿ ಸದÀ್ಯದ ಮಟ್ಟಿಗೆ ಸೋಮವಾರಪೇಟೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ಹೀಗಿರುವಾಗ ಅಲ್ಲಿನ ಕಾರ್ಯಕರ್ತರನ್ನು ನಿರ್ಲಕ್ಷಿಸಿ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ, ಪ್ರಮುಖರಾದ ಜಾನಕಿ, ಹೆಚ್.ಕೆ.ಪ್ರ್ರೆಸಿ ಹಾಗೂ ಧರ್ಮಪ್ಪ ಉಪಸ್ಥಿತರಿದ್ದರು.

ದಕ್ಷಿಣ ಕೊಡಗಿನಲ್ಲಿ ವಿರೋಧ

ವೀರಾಜಪೇಟೆ ತಾಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರು ಸಣ್ಣುವಂಡ ಶ್ರೀನಿವಾಸ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲಿನಲ್ಲಿ ಸಭೆ ನಡೆಸಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಕೆ.ಎಂ. ಗಣೇಶ್‍ರವರಿಗೆ ಯಾವದೇ ರೀತಿಯ ಸಹಕಾರ ನೀಡದಂತೆ ತೀರ್ಮಾಸಿದ್ದಾರೆ.

ಜಿಲ್ಲೆಯ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಅವಾಹಗನೆಗೆ ಬಾರದೆ ನೇರವಾಗಿ ಗಣೇಶ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್. ವಿಶ್ವನಾಥ್ ಅವರು ನೇಮಕ ಮಾಡಿರುವದು ಸರಿಯಲ್ಲ. ಪಕ್ಷದಲ್ಲಿ 30, 35 ವರ್ಷಗಳಿಂದ ಪಕ್ಷವನ್ನು ತಳಹದಿಯಿಂದ ಕಟ್ಟಿದ ಮುಖಂಡರುಗಳಿದ್ದು, ಅವರಿಗೆ ಮನ್ನಣೆ ನೀಡದಿರುವದು ವಿಷಾದಕರ.

ಈ ನೇಮಕಾತಿಯನ್ನು ಒಂದುವಾರದ ಒಳಗೆ ಸರಿಪಡಿಸದಿದ್ದರೆ, ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಸಲ್ಲಿಸಲು ಸಭೆಯಲ್ಲಿ ಹಾಜರಿದ್ದ ಜೆಡಿಎಸ್ ಮುಖಂಡರು ತೀರ್ಮಾನಿಸಿದರು. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರ ಅವಾಹಗನೆಗೆ ತರಲಾಗಿದೆ.

ಸಭೆಯಲ್ಲಿ ಅಮ್ಮತ್ತಿಯ ಕಲಿಯಂಡ ನಾಣಯ್ಯ, ಗೋಣಿಕೊಪ್ಪದಲ್ಲಿನ ವಾಟೇರಿರ ವಿರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಬಿ. ಗಣೇಶ್, ರಾಜ್ಯ ಪರಿಶಿಷ್ಟ ಘಟಕದ ಉಪಾಧ್ಯಕ್ಷ ಪಿ.ಎಸ್. ಮುತ್ತ, ಬಿರುನಾಣಿಯ ಕರ್ತಮಾಡ ನರೇಂದ್ರ, ಬಿ. ಶೆಟ್ಟಿಗೇರಿಯ ಮಾಂಗೆರ ಸಾಬು, ಪೊನ್ನಂಪೇಟೆಯ ಮಚ್ಚಿಯಂಡ ಮಹೇಶ್, ತಿತಿಮತಿಯ ಜೆಡಿಎಸ್ ಅಧ್ಯಕ್ಷ ಅರುಣ್‍ಗೌಡ, ಟಿ. ಶೆಟ್ಟಿಗೇರಿಯ ಉಳುವಂಗಡ ದತ್ತ, ಮಚ್ಚಮಾಡ ಮಾಚಯ್ಯ (ಟಿ. ಶೆಟ್ಟಿಗೇರಿ), ಬಿಳುಗುಂದ ಏಜೇಸ್, ಬಾಳೆಲೆ-ಕಾರ್ಮಾಡುವಿನ ವಿಜಯ, ಕಾಕೋಟುಪಂರಬುವಿನ ಅಮ್ಮಂಡ ವಿವೇಕ್ ಹಾಗೂ ಇತರ ಮುಖಂಡರು ಹಾಜರಿದ್ದರು.