ಸುಂಟಿಕೊಪ್ಪ, ಮಾ. 13: 15 ರಿಂದ 30 ವರ್ಷದ ಯುವ ಜನಾಂಗದವರಲ್ಲಿ ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿರುವದು ಅಪಾಯಕರ ಬೆಳವಣಿಗೆಯಾಗಿದೆ ಎಂದು ಹಿರಿಯ ಜಿಲ್ಲಾ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ವಿಷಾದಿಸಿದರು.

ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಮತ್ತು ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಇವರ ಸಹಯೋಗದೊಂದಿಗೆ ನಡೆಯುವ ಸಮಾಜ ಕಾರ್ಯ ಶಿಬಿರವನ್ನು ಸ್ವಸ್ಥ ಆವರಣದಲ್ಲಿ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಂಥಹ ಶಿಬಿರದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಯುವ ಜನಾಂಗ ಪದವಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಆದರೆ, ನೈತಿಕ ಮೌಲ್ಯವನ್ನು ಜೀವನದಲ್ಲಿ ಅಳವಡಿಸದೆ ಅಪರಾಧ ಚಟುವಟಿಕೆಯಲ್ಲಿ, ಮಾದಕ ದ್ರವ್ಯ ಸೇವನೆಯಲ್ಲಿ ಹೆಚ್ಚಾಗಿ ತೊಡಗಿಸಿ ಕೊಳ್ಳುತ್ತಿರುವದು ವಿಷಾದನೀಯ ಎಂದರು.

ಶಿಬಿರದ ಸಂಚಾಲಕರೂ ಜೆಎಸ್‍ಎಸ್ ಕಾಲೆÉೀಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಕುಮುದಿನಿ ಅಚ್ಚಿ ಮಾತನಾಡಿ, 7 ದಿನಗಳ ಕಾಲ ನಡೆಯುವ ಸಮಾಜ ಕಾರ್ಯ ಶಿಬಿರದಲ್ಲಿ ಕ್ರಿಯಾಶೀಲತೆಯಿಂದ ಭಾಗವಹಿಸಿ ಶಿಬಿರವನ್ನು ಶಿಬಿರಾ ರ್ಥಿಗಳು

ಯಶಸ್ವಿ ಗೊಳಿಸಬೇಕೆಂದರು. ಮುಖ್ಯ ಅತಿಥಿಗಳಾಗಿದ್ದ ಟಾಟಾ ಕಾಫಿ ಲಿಮಿಟೆಡ್‍ನ ವ್ಯವಸ್ಥಾಪಕರಾದ ಎಂ.ಬಿ. ಮುತ್ತಣ್ಣ ಮಾತನಾಡಿ ಶ್ರಮದಾನ ಸಮಾಜಸೇವೆ ಮಾಹಿತಿಯನ್ನು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಡೆದುಕೊಳ್ಳುವಂತಾಗಲಿ ಎಂದರು.

ಸ್ವಸ್ಥ ನಿರ್ದೇಶಕಿ ಆರತಿ ಸೋಮಯ್ಯ ಅವರು ಗ್ರಾಮೀಣ ಬಡ ಜನತೆಯ ಬದುಕಿನ ಚಿತ್ರಣವನ್ನು ಒಳನುಗ್ಗಿ ಅರಿತುಕೊಳ್ಳುವ ಪ್ರಯತ್ನವನ್ನು ಶಿಬಿರಾರ್ಥಿಗಳು ಮಾಡಬೇಕೆಂದರು.

ಮಡಿಕೇರಿ ನ್ಯಾಯಾಲಯದ ಸಹಾಯಕ ಆಡಳಿತಾಧಿಕಾರಿ ಜಯಪ್ಪ ಉಪಸ್ಥಿತರಿದ್ದರು. ಸ್ವಸ್ಥ ಶಾಲೆಯ ವಿದ್ಯಾರ್ಥಿನಿ ಲತಾ ಪ್ರಾರ್ಥಿಸಿ, ಶಿಬಿರಾರ್ಥಿ ರಕ್ಷಿತ್‍ಗೌಡ ಸ್ವಾಗತಿಸಿ, ಭಾರತಿ ವಂದಿಸಿದರು.