*ಸಿದ್ದಾಪುರ, ಮಾ. 13: ಕಾಡಿನೊಂದಿಗೆ ಅವಿನಾಭಾವ ಸಂಬಂಧವಿರಿಸಿ ಕೊಂಡು ವನ ದೇವತೆಯನ್ನು ಪೂಜಿಸುತ್ತಾ ಅರಣ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವೀರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಆದಿವಾಸಿಗಳ ಬದುಕು ಕಾಡಾನೆ ಹಾವಳಿ, ಅರಣ್ಯವಾಸಿ ಕುಟುಂಬದವರನ್ನು ಕಾಡಿನಿಂದ ಒಕ್ಕಲೆಬ್ಬಿಸುವ ತೂಗು ಕತ್ತಿಯಿಂದ ಅತಂತ್ರತೆಯಲ್ಲಿದ್ದಾರೆ.
ತಲತಲಾಂತರದಿಂದ ತಿತಿಮತಿ ಮೀಸಲು ಅರಣ್ಯ ವಲಯದ ವ್ಯಾಪ್ತಿಯ ದೇವಮುಚ್ಚಿ ಚೆನ್ನಂಗಿ ಬದುಕಿನ ಬಂಡಿ ಸಾಗಿಸುತ್ತಿದ್ದ ಪರಿಶಿಷ್ಟ ಪಂಗಡದವರು ಮುಂದೇನು ಎಂದು ತಲೆಯ ಮೇಲೆ ಕೈಹೊತ್ತು ಕುಳಿತು ಆಕಾಶ ನೋಡುವಂತಾಗಿದೆ.
ಹಲವು ವರ್ಷಗಳ ಹಿಂದೆ ಇಲ್ಲಿನ ಆದಿವಾಸಿಗಳು ಸಾವಿರಾರು ಎಕ್ರೆಯಷ್ಟು ಭತ್ತದ ಗದ್ದೆಯನ್ನು ರೂಡಿಸಿಕೊಂಡು ಅಲ್ಪ ಸ್ವಲ್ಪ ಜಮೀನಿನಲ್ಲಿ ಕಾಫಿ ಗಿಡಗಳನ್ನು ನೆಟ್ಟು ಪೋಷಿಸಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಕಾಡಾನೆ ಹಾವಳಿ ವಿಪರೀತವಾಗಿದ್ದರಿಂದ ಉತ್ತು ಬಿತ್ತು ಬೆಳಸಿದ ಭತ್ತ ಕಾಡಾನೆ ಪಾಲಾಗುತ್ತಿರುವದರಿಂದ ಗದ್ದೆ ಕೃಷಿಯನ್ನು ಕೈ ಬಿಟ್ಟಿದ್ದಾರೆ.
ಕಾಡಾನೆ ಹಾವಳಿ ನಿಯಂತ್ರಿಸಲು ಈ ವಿಭಾಗದ ರೈತರ ಆದಿವಾಸಿಗಳ ನಿರಂತರ ಹೋರಾಟದಿಂದ ಕಾಡಾನೆ ತಡೆಗೆ ರೈಲ್ವೆ ಕಂಬಿಯನ್ನು ಅಳವಡಿಸಲು ಅರಣ್ಯ ಇಲಾಖೆಗೆ ಕೇಂದ್ರದ ಒಪ್ಪಿಗೆ ಲಭಿಸಿತ್ತು. ಚನ್ನಂಗಿ ಅರಣ್ಯ ಕಚೇರಿಗೆ ರೈಲ್ವೆ ಹಳಿಯನ್ನು ತಂದು ಇರಿಸಲಾಗಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ವಿಳಂಬವಾಗಿ ರುವದರಿಂದ ತಿತಿಮತಿ ಅರಣ್ಯ ವಲಯಕ್ಕೆ ಕಾಡಾನೆ ನಿಯಂತ್ರಿಸಲು ಕಂಬ ಅಳವಡಿಸದೆ ಸಮಸ್ಯೆಯಾಗಿದೆ.
ಈ ಭಾಗದ ಜನರ ಸತತ ಹೋರಾಟದಿಂದ ಕಾಡಾನೆ ಹಾವಳಿ ತಡೆಗಟ್ಟಲು ಕೇಂದ್ರ ಸರಕಾರದಿಂದ ರೈಲ್ವೆ ಕಂಬ ಬಂದಿದೆ. ಇದರಿಂದ ಬೆಳೆಗಾರರಿಗೆ ಅನುಕೂಲಕರವಾಗಿದೆ. ಟೆಂಡರ್ ಶೀಘ್ರದಲ್ಲೇ ಕರೆದು ಕಾಮಗಾರಿ ಆರಂಭಿಸುವ ಕಾರ್ಯ ಆಗಬೇಕು ಎಂದು ಕಾಫಿ ಬೆಳೆಗಾರ ವಾಟೇರ ಸುರೇಶ್ ಆಗ್ರಹಿಸಿದ್ದಾರೆ.
ಚನ್ನಯ್ಯನಕೋಟೆ ಗ್ರಾ.ಪಂ. ಸದಸ್ಯ ಮೆಕೇರಿರ ಅರುಣ್ ಹಲವಾರು ಬಾರಿ ಹೋರಾಟ ನಡೆಸಿ ಶಾಸಕರಿಗೆ, ಸಂಸದರಿಂದ ಕೇಂದ್ರ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ ಮೇರೆಗೆ ಕಾಡಾನೆ ತಡೆಗಟ್ಟಲು ರೈಲ್ವೆ ಕಂಬ ಬೇಲಿ ಪರಿಕರಗಳು ಅರಣ್ಯ ಇಲಾಖೆಗೆ ಬಂದಿದೆ. ಕಾಮಗಾರಿ ಆದಷ್ಟು ಬೇಗ ಮಾಡಿದರೆ ಬೆಳೆಗಾರರ, ಗ್ರಾಮಸ್ಥರ ಸಮಸ್ಯೆ ಆತಂಕ ನಿವಾರಣೆಯಾಗಲಿದೆ ಎಂದು ಹೇಳಿದರು.