ಮಡಿಕೇರಿ, ಮಾ. 11: ರಾಜಕೀಯವಾಗಿ ಕುತೂಹಲ ಮೂಡಿಸಿದ್ದು, ಕಳೆದ ಹಲವು ಸಮಯ ಗಳಿಂದ ಅಧ್ಯಕ್ಷರಿಲ್ಲದೆ ಮುನ್ನಡೆಯುತ್ತಿದ್ದ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ಕೊಡಗು ಜಿಲ್ಲೆಗೆ ಕೊನೆಗೂ ಅಧ್ಯಕ್ಷರ ನೇಮಕಾತಿ ಯಾಗಿದ್ದು, ಕೆ.ಎಂ. ಗಣೇಶ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ಆದೇಶಾನುಸಾರ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಅವರು ಗಣೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.ಇಂದು ದಿಢೀರ್ ಆಗಿ ಗಣೇಶ್ ಅವರಿಗೆ ರಾಜ್ಯಾಧ್ಯಕ್ಷರು ನೇಮಕಾತಿಯ ಆದೇಶ ಪ್ರತಿ ಹಸ್ತಾಂತರಿಸಿ ದ್ದಾರೆ. ಜೆಡಿಎಸ್ ಪಕ್ಷದ ಅಧ್ಯಕ್ಷಗಾದಿ ಬಗ್ಗೆ ಗೊಂದಲಗಳು ಏರ್ಪಟ್ಟು ಈ ಹಿಂದೆ ಅಧ್ಯಕ್ಷರಾಗಿದ್ದ ಸಂಕೇತ್ ಪೂವಯ್ಯ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಧ್ಯಕ್ಷ ಗಾದಿಗೆ ಬಹಳಷ್ಟು ಮಂದಿ ಆಕಾಂಕ್ಷಿ ಗಳಾಗಿದ್ದರು. ಈ ನಡುವೆ ಲೋಕಸಭಾ ಚುನಾವಣೆ ಕೂಡ ಘೋಷಣೆಯಾದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಲ್ಲಿ ದಿಢೀರಾಗಿ ಪಕ್ಷಕ್ಕೆ ಅಧ್ಯಕ್ಷರನ್ನು ನೇಮಿಸಲಾಗಿದೆ.

ಗಣೇಶ್ ಅವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎರಡು ಬಾರಿ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಸೇರಿದಂತೆ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷರಾಗಿದ್ದು, ಚೇಂಬರ್ ಆಫ್ ಕಾಮರ್ಸ್ ಹೀಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿ ಕೊಂಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಸೇರ್ಪಡೆ ಗೊಂಡಿದ್ದು, ಇದೀಗ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಸಂಕೇತ್ ಮನವಿ

ಇದಕ್ಕೂ ಮುನ್ನ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷರಾಗಿದ್ದ ಮೇರಿಯಂಡ ಸಂಕೇತ್ ಪೂವಯ್ಯ ಪಕ್ಷದ ರಾಷ್ಟ್ರೀಯ

(ಮೊದಲ ಪುಟದಿಂದ) ಅಧ್ಯಕ್ಷ ಹೆಚ್.ಡಿ. ದೇವೆಗೌಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕಾಫಿ, ಕರಿಮೆಣಸಿನ ವಿಚಾರದಲ್ಲಿ ಬೆಳೆಗಾರರಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.

ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾವದೇ ಜವಾಬ್ದಾರಿ ನೀಡಿದರೂ ಯಶಸ್ವಿಯಾಗಿ ಕೆಲಸ ನಿರ್ವಹಿಸುವದಾಗಿ ಹೇಳಿದರು.

ಪಕ್ಷವು ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನಡೆದ ವಿಧ್ಯಾಮಾನದ ಸೂಕ್ಷ್ಮತೆಯನ್ನು ದೇವೆಗೌಡರಿಗೆ ವಿವರಿಸಿದರು. ಜಿಲ್ಲೆಯಲ್ಲಿ ಜಾತ್ಯತೀತ ಮನೋಭಾವವಿರುವ ಅನುಭವಿ ರಾಜಕಾರಣಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ.ಆ ನಿಟ್ಟಿನಲ್ಲಿ ಕೂಡಲೇ ನಿರ್ಧಾರ ಕೈಗೊಂಡಲ್ಲಿ ಚುನಾವಣೆಗೆ ಅನುಕೂಲಕರ ವಾತಾವರಣವಾಗಲಿದೆ ಎಂದರು. ಈ ಸಂದರ್ಭ ಜೆಡಿಎಸ್‍ನ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್‍ರವರನ್ನು ಪಕ್ಷದ ಕಚೇರಿಯಲ್ಲಿ ಭೇಟಿ ಮಾಡಿ ರಾಜಕೀಯ ವಿಚಾರ ವಿನಿಮಯ ನಡೆಸಿದರು.