ಮಡಿಕೇರಿ, ಮಾ. 11: ಬೇಸಿಗೆಯ ತಾಪ ಹೆಚ್ಚಾಗುವದರೊಂದಿಗೆ ನೈಸರ್ಗಿಕ ಜಲಮೂಲಗಳು ಬತ್ತುತ್ತಿರುವ ಸಂದರ್ಭ ಎಲ್ಲಿಯೂ ಕುಡಿಯುವ ನೀರಿನ ತೊಂದರೆ ಎದುರಾಗದಂತೆ ಕರ್ನಾಟಕ ಸರಕಾರದ ನಿರ್ದೇಶನದಂತೆ ಜಿ.ಪಂ.ನಿಂದ ಜಲಾಮೃತ ಯೋಜನೆಯಡಿ ನಿಗಾ ವಹಿಸಲಾಗುತ್ತಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಸ್ಪಷ್ಟಪಡಿಸಿದ್ದಾರೆ. ಅಲ್ಲಲ್ಲಿ ಕುಡಿಯುವ ನೀರಿನ ಬವಣೆ ಬಗ್ಗೆ ದೂರುಗಳು (ಮೊದಲ ಪುಟದಿಂದ) ಕೇಳಿಬರುತ್ತಿರುವ ಕುರಿತು ‘ಶಕ್ತಿ’ ಅವರ ಗಮನ ಸೆಳೆಯಲಾಗಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.ಈಗಾಗಲೇ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಗಳು ಸರಕಾರದ ವಿವಿಧ ಇಲಾಖೆಗಳಿಗೆ ಸ್ಪಷ್ಟ ನಿರ್ದೇಶನದೊಂದಿಗೆ ಎಲ್ಲಾ ಅಧಿಕಾರಿಗಳು ಜಲಾಮೃತ ಯೋಜನೆಗೆ ಅನುಗುಣವಾಗಿ ಎಲ್ಲಿಯೂ ನೀರಿನ ಸಮಸ್ಯೆ ಎದುರಾಗದಂತೆ ಕಾಳಜಿ ತೋರಬೇಕಾಗುತ್ತದೆ ಎಂದು ನೆನಪಿಸಿದ್ದಾರೆ. ಆ ಪ್ರಕಾರ ಪ್ರತಿಯೊಂದು ಇಲಾಖೆಯವರು ಕುಡಿಯುವ ನೀರಿನ ಪೂರೈಕೆ ಸಂಬಂಧ ಗಮನ ನೀಡಬೇಕಿದ್ದು, ಜಿಲ್ಲೆಯಲ್ಲಿ ಈ ಬಗ್ಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ, ತಾ.ಪಂ., ಗ್ರಾ.ಪಂ. ಹಂತದಲ್ಲಿ ಹಾಗೂ ಜಿಲ್ಲಾ ಆಡಳಿತದ ಗಮನಕ್ಕೆ ಬಂದರೆ ಎಲ್ಲಿ ಸಮಸ್ಯೆ ಎದುರಾದರೂ ಕೂಡಲೇ ಸ್ಪಂದಿಸಿ, ನೀರಿನ ಸಮಸ್ಯೆ ಬಗೆಹರಿಸಲಾಗುವದು ಎಂದು ಅವರು ವಿವರಿಸಿದ್ದಾರೆ. ಎಲ್ಲಾ ಗ್ರಾ.ಪಂ. ಪಿಡಿಓಗಳಿಗೂ ಈ ದಿಸೆಯಲ್ಲಿ ಸರಕಾರದ ನಿರ್ದೇಶನದತ್ತ ಗಮನ ಸೆಳೆಯಲಾಗಿದೆ ಎಂದು ಲಕ್ಷ್ಮಿಪ್ರಿಯ ನೆನಪಿಸಿದ್ದಾರೆ.

ಆತಂಕದಲ್ಲಿ ಜನತೆ : ಜಿಲ್ಲೆಯಲ್ಲಿ ದಿನಗಳು ಉರುಳಿದಂತೆ ಬಿಸಿಲಿನ ತಾಪ ಏರತೊಡಗಿದ್ದು, ಉಷ್ಣಾಂಶ ಹೆಚ್ಚಾಗತೊಡಗಿದೆ. ಕೊಡಗಿನ ನದಿ, ತೊರೆಗಳು, ಕೆರೆ, ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿಯುವಂತಾಗಿ ಸಣ್ಣಪುಟ್ಟ ಜಲಮೂಲಗಳು ಬತ್ತಿಹೋಗಿವೆ. ಪರಿಣಾಮ ಗ್ರಾಮೀಣ ಭಾಗದ ರೈತರು ತಮ್ಮ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಬೇಸಿಗೆ ಬೆಳೆಗೆ ತೊಡಕು: ಗ್ರಾಮೀಣ ಭಾಗಗಳಲ್ಲಿ ಕಳೆದ ಪ್ರಾಕೃತಿಕ ವಿಕೋಪದ ನಡುವೆ ಭತ್ತ ಇತ್ಯಾದಿ ಬೆಳೆಯ ಫಸಲು ಕಳೆದುಕೊಂಡಿರುವ ರೈತರಿಗೆ ಬೇಸಿಗೆ ಬೆಳೆಯು ನೀರಿನ ಕೊರತೆಯಿಂದ ಕೃಷಿ ಮಾಡಲಾಗದೆ ತೊಡಕು ಉಂಟಾಗಿರುವ ಬಗ್ಗೆ ಅನೇಕರು ಅಳಲು ತೋಡಿಕೊಂಡಿದ್ದಾರೆ. ಹಾರಂಗಿ ಜಲಾನಯನ ಪ್ರದೇಶದ ನಾಲೆಗಳ ಮೂಲಕ ನೀರಿನ ಪ್ರಯೋಜನ ಪಡೆದು ಬೆಳೆ ಬೆಳೆಯುವ ಹಲವಷ್ಟು ರೈತರು ಈಗಾಗಲೇ ಕಾಯಕನಿರತರಾಗಿದ್ದಾರೆ.

ಈ ಹಂತದಲ್ಲಿ ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೂ, ಆ ಬೆನ್ನಲ್ಲೇ ಬಿಸಿಲಿನ ತಾಪ ಅಧಿಕಗೊಳ್ಳುತ್ತಿರುವ ಕಾರಣ, ಅಲ್ಲಲ್ಲಿ ಇರುವ ಸಣ್ಣಪುಟ್ಟ ಜಲಮೂಲಗಳ ನೀರು ಮತ್ತಷ್ಟು ಆರಿಹೋಗುತ್ತಿದೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಈಗಿನಿಂದಲೇ ಮುಂಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇದೆ. ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಕೂಡ ಜನತೆಗೆ ಕನಿಷ್ಟ ಕುಡಿಯುವ ನೀರಿನ ಬವಣೆ ನೀಗಿಸಲು ಕಾಳಜಿ ವಹಿಸಬೇಕಿದೆ.