ಶ್ರೀಮಂಗಲ, ಮಾ. 10: ಇರ್ಪು ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ರಾತ್ರಿ ಗೋಣಿಕೊಪ್ಪಲುವಿನ ಕಾವೇರಿ ಕಲಾಸಿರಿ ತಂಡ ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮ ನೆರೆದಿದ್ದವರ ಮನ ಸೆಳೆಯಿತು. ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಕೊಡವ, ಕನ್ನಡ, ತಮಿಳು ಮಲಯಾಳಂ ಭಾಷೆಯ ಗೀತೆಗಳು, ಮನಮೋಹಕ ನೃತ್ಯಗಳು ಹಾಸ್ಯ ಹಾಗೂ ಮಿಮಿಕ್ರಿ ಜನರನ್ನು ರಂಜಿಸಿದವು. ರಾತ್ರಿ 10.30 ರಿಂದ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಯಿತು.

ಶಿವರಾತ್ರಿಯ ಮಾರನೆ ದಿನ ಬೆಳಿಗ್ಗೆ ಜಾತ್ರಾ ಮಹೋತ್ಸವ ಮತ್ತು ದೇವರ ಅವಭೃತ ಸ್ನಾನ ಮಹೋತ್ಸವ ನಡೆಯಿತು. ಸಾವಿರಾರು ಭಕ್ತರು ಲಕ್ಷ್ಮಣ ತೀರ್ಥ ನದಿಯ ಇರ್ಪು ಜಲಪಾತದಲ್ಲಿ ತೀರ್ಥ ಸ್ನಾನ ಮಾಡಿ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯ ವರೆಗೆ ಶ್ರೀ ರಾಮೇಶ್ವರ ದೇವಾಲಯದಲ್ಲಿ ಅನ್ನ ಸಂತರ್ಪಣೆ ನಡೆಯಿತು. ದೇವರ ಉತ್ಸವದ ಉಸ್ತುವಾರಿಯನ್ನು ದೇವಾಲಯದ ಆಡಳಿತಾಧಿಕಾರಿ ತಹಶೀಲ್ದಾರ್ ಗೋವಿಂದ ರಾಜು ವಹಿಸಿದ್ದರು. ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗೌತಮ್ ದೇಶಪಾಂಡೆ ಪ್ರಸಾದದ ಗುಣಮಟ್ಟವನ್ನು ಪರಿಶೀಲಿಸಿದರು. ಕರುಣಾ ಟ್ರಸ್ಟ್ ನವರು ಭಕ್ತಾದಿಗಳಿಗೆ ವೈದ್ಯಕೀಯ ಸೇವೆ ಒದಗಿಸಿದ್ದರು. ಡಿವೈಎಸ್ಪಿ ನಾಗಪ್ಪ, ವೃತ್ತನಿರೀಕ್ಷಕ ದಿವಾಕರ್, ಎಸ್‍ಐ ಮರಿಸ್ವಾಮಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಈ ಸಂದರ್ಭ ಶ್ರೀ ಇರ್ಪು ರಾಮೇಶ್ವರ ದೇವಾಲಯದ ಕಾರ್ಯನಿರ್ವಹಣಾಧಿಕಾರಿ, ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ನೀರಿನ ಸದ್ಬಳಕೆ ಮತ್ತು ಸಂರಕ್ಷಣೆಗೆ ಒತ್ತು ನೀಡಲು ಕರೆ

ಮಡಿಕೇರಿ, ಮಾ. 10: ಪಂಚಭೂತಗಳಲ್ಲಿ ಒಂದಾದ ನೀರು ಪ್ರತಿಯೊಬ್ಬರ ಬಳಕೆಗೆ ಪ್ರತಿದಿನವೂ ಬೇಕಾಗುವ ಅತ್ಯಮೂಲ್ಯ ನೈಸರ್ಗಿಕ ಸಂಪತ್ತು. ನೀರಿನ ಮಿತ ಬಳಕೆ, ಸದ್ಬಳಕೆ ಮತ್ತು ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬ ರಲ್ಲೂ ತಿಳುವಳಿಕೆ ಇರಬೇಕು ಎಂದು ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಸಲಹೆ ಮಾಡಿದ್ದಾರೆ.

ಕೇಂದ್ರೀಯ ಅಂತರ್ಜಲ ಮಂಡಳಿ, ಜಲ ಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನಃಶ್ಚೇತನ ಮಂತ್ರಾಲಯ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ನೀರಿನ ಸಂರಕ್ಷಣೆಗಾಗಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ನಾನ ಮಾಡಲು, ಬಟ್ಟೆ ತೊಳೆಯಲು, ಮನೆ ಕಾರ್ಯ ಹೀಗೆ ಬದುಕಿನ ಎಲ್ಲಾ ಚಟುವಟಿಕೆಗಳಿಗೂ ನೀರು ಅತ್ಯವಶ್ಯಕ. ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು.

ಪ್ರತಿಯೊಬ್ಬರ ಮನೆಯಲ್ಲಿಯೂ ಮಳೆ ಕೊಯ್ಲು ಅಳವಡಿಸಿಕೊಳ್ಳಲು ಮುಂದಾಗಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇಶದ 26 ರಾಜ್ಯಗಳನ್ನು ಬರಪೀಡತವೆಂದು ಘೋಷಿಸಲಾಗಿದೆ. ರಾಜ್ಯದ 16 ಜಿಲ್ಲೆಗಳನ್ನು ಬರಪೀಡಿತವೆಂದು ಪ್ರಕಟಿಸಲಾಗಿದೆ. ನೀರಿನ ಮಹತ್ವದ ಬಗ್ಗೆ ಎಚ್ಚರಗೊಳ್ಳ ದಿದ್ದರೆ ಮುಂದಿನ ಪೀಳಿಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜು ಮಾತನಾಡಿ, ಹಿಂದೆ ಸಂಪತ್ತು, ಅಧಿಕಾರಕ್ಕಾಗಿ ಯುದ್ದಗಳು ನಡೆಯುತ್ತಿದ್ದವು. ಆದರೆ ಇಂದು ಕುಡಿಯುವ ನೀರಿಗಾಗಿ ಯುದ್ಧಗಳು ನಡೆಯುತ್ತಿರುವದನ್ನು ಕಾಣಬಹುದಾಗಿದೆ. ರಾಜ್ಯದ ಪಶ್ಚಿಮ ಘಟ್ಟ ಪ್ರದೇಶವನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಿದೆ ಎಂದರು. ನೀರು ಮತ್ತು ಮಣ್ಣಿನ ಸಂರಕ್ಷಣೆ ಒಂದು ರೀತಿ ಸವಾಲು ಆಗಿದ್ದು, ಆರೋಗ್ಯಯುತ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವತ್ತ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಹಿರಿಯ ಭೂ ವಿಜ್ಞಾನಿ ಸೌಮ್ಯ ಮಾತನಾಡಿ ನೀರಿಗೆ ಬದಲಿ ವಸ್ತು ಇನ್ನೊಂದಿಲ್ಲ. ಭೂಮಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಶೇ.2.7 ರಷ್ಟು ಮಾತ್ರ ಶುದ್ಧ ಕುಡಿಯುವ ನೀರು ದೊರೆಯುತ್ತಿದ್ದು, ನೀರಿಲ್ಲದೆ ಜೀವನ ಅಸಾಧ್ಯ ಎಂದರು.

ಕುಡಿಯಲು, ನೀರಾವರಿಗೆ ಹಾಗೂ ಕೈಗಾರಿಕೆಗೆ ನೀರು ಅತ್ಯಗತ್ಯ. ಶುದ್ಧ ನೀರು ಒಂದು ವಿಶೇಷ ವಸ್ತು, ಸೂಕ್ತ ಸ್ಥಾನಮಾನದೊಂದಿಗೆ ಅದರ ರಕ್ಷಣೆ ಅಗತ್ಯ ಎಂದರು. ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಎ.ಸುಬ್ಬುರಾಜ್ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಅಂತರ್ಜಲದ ಬಳಕೆ ಅನಿವಾರ್ಯ. ಆದರೆ, ಅತಿಯಾದ ಬಳಕೆ ಅಪಾಯಕ್ಕೆ ಆಹ್ವಾನ ಎಂದರು.

ಅಂತರ್ಜಲ ಬಳಿಕೆಯಿಂದ ಅಂತರ್ಜಲ ಮಟ್ಟದ ಕುಸಿತ, ಬತ್ತಿದ ಬಾವಿಗಳು, ಕೊಳವೆ ಬಾವಿಗಳ ಇಳುವರಿಯಲ್ಲಿ ವ್ಯತ್ಯಾಸ ಹಾಗೂ ಕುಸಿತ, ಇತ್ಯಾದಿ ನೀರಿನ ಎಲ್ಲಾ ಮೂಲಗಳಿಗೂ ಮಳೆಯ ನೀರೇ ಆಧಾರ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಂತೇಶ್ ಅವರು ನೀರಿನ ಸಂರಕ್ಷಣೆ, ಅಂತರ್ಜಲ ಪರಿಸ್ಥಿತಿ, ಅಂತರ್ಜಲ ಸುಸ್ಥಿರತೆ, ನಿರ್ವಹಣೆ, ಅಂತರ್ಜಲ ಗುಣಮಟ್ಟ ಮತ್ತು ಆರೋಗ್ಯ ಅಂತರ್ಜಲ ಪರಿಶೋಧನೆ, ಅಂತರ್ಜಲ ಪ್ರಮಾಣ ಅಂದಾಜೀಕರಣ, ಮಳೆ ನೀರು ಸಂಗ್ರಹಣೆ, ಜಲ ದರಗಳ ಕೃತಕ ಮರುಪೂರಣ, ಗ್ರಾಮೀಣ ನೀರು ಪೂರೈಕೆ ಹಾಗೂ ನಿರ್ವಹಣೆ ಮತ್ತಿತರ ಬಗ್ಗೆ ಮಾತನಾಡಿದರು.

ಕೇಂದ್ರೀಯ ಅಂತರ್ಜಲ ಮಂಡಳಿ ವಿಜ್ಞಾನಿಗಳಾದ ಎಂ. ಮುತ್ತುಕಣ್ಣನ್, ಡಾ. ಅನಂತ್ ಕುಮಾರ್ ಅರಸ್, ಬಾಲಚಂದ್ರನ್ ಇತರರು ಇದ್ದರು.