ಮಡಿಕೇರಿ, ಮಾ. 10: ರಾಮಕೃಷ್ಣ ಪರಮಹಂಸರ ತರುವಾಯ ಕಣ್ಣಿಗೆ ಕಾಣುವ ದೇವರಾಗಿ ಜೀವಿಸಿದ್ದವರು ತುಮಕೂರಿನ ಸಿದ್ಧಗಂಗಾ ಶ್ರೀಗಳಾದ ಶಿವಕುಮಾರಸ್ವಾಮೀಜಿಗಳು ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಮಹದೇವಪೇಟೆಯಲ್ಲಿನ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಮತ್ತು ಅಕ್ಕನ ಬಳಗದ ವತಿಯಿಂದ ಆಯೋಜಿತ ಶ್ರೀ ಸಿದ್ಧಗಂಗಾ ಶಿವಕುಮಾರ ಮಹಾಸ್ವಾಮೀಜಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಳಂಚೇರಿ ಮಠಾಧೀಶರು, ಸಾಮಾಜಿಕ ಕ್ರಾಂತಿ, ಜೀವನಮೌಲ್ಯಗಳಿಗೆ ಹೆಸರುವಾಸಿಯಾಗಿದ್ದ ಸಿದ್ಧಗಂಗಾ ಶ್ರೀಗಳು ಮಹಾನ್ ವಿಶ್ವವಿದ್ಯಾಲಯದಂತೆ ಇದ್ದವರು. ಅವರಿಗೆ ದೊರಕದಿರುವ ಬಿರುದುಗಳೇ ಇಲ್ಲ. ಹೀಗಿದ್ದರೂ ಅಹಂ ಇಲ್ಲದೇ ಸಾರ್ಥಕ ಜೀವನ ಸಾಗಿಸಿದ ಹಿರಿಮೆ ಸ್ವಾಮೀಜಿಗಳದ್ದು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಸ್ವಾಮೀಜಿಗಳಿಗೆ ಭಾರತ ರತ್ನ ದೊರಕಲೇಬೇಕಿತ್ತು ಎಂಬ ಅನಿಸಿಕೆ ಹಲವರದ್ದಾಗಿತ್ತು. ಇದಕ್ಕಾಗಿ ಪ್ರಯತ್ನಗಳು ಮುಂದುವರೆದಿದ್ದು ಮರಣೋತ್ತರವಾಗಿಯಾದರೂ ಶ್ರೀಗಳಿಗೆ ಭಾರತರತ್ನ ದೊರಕುವಂತಾಗಲಿ ಎಂದು ಹಾರೈಸಿದರು. ಪ್ರತೀ ನಿತ್ಯ ಮಠದಲ್ಲಿನ 10 ಸಾವಿರಕ್ಕೂ ಅಧಿಕ ಮಕ್ಕಳನ್ನು ಮುತ್ತಜ್ಜನ ರೀತಿಯಲ್ಲಿ ಪಾಲನೆ ಮಾಡುತ್ತಿದ್ದ ಹಿರಿಯ ಜೀವವದು ಎಂದು ಸ್ಮರಿಸಿಕೊಂಡರು.

ರಾಜ್ಯ ಸರ್ಕಾರಿ ಅಭಿಯೋಜಕ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ಶ್ರೀಗಳು ಶಿವೈಕ್ಯರಾದಾಗ 16 ಲಕ್ಷಕ್ಕೂ ಅಧಿಕ ಮಂದಿ ಮಠಕ್ಕೆ ಬಂದದ್ದು ಸ್ವಾಮೀಜಿಗಳ ಬಗೆಗಿನ ಭಕ್ತರ ಭಾವನೆಗೆ ನಿದರ್ಶನವಾಗಿದೆ ಎಂದರಲ್ಲದೆ, ಎಂದಿಗೂ ಸಾವೇ ಬಾರದಿರಲಿ ಎಂದು ಭಕ್ತಕೋಟಿ ಬಯಸಿದ್ದ ಮಹಾನ್ ಜೀವ ಅದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ,

(ಮೊದಲ ಪುಟದಿಂದ) ಕಾಯಕಮಠವಾಗಿ ಸಿದ್ಧಗಂಗಾ ಮಠವನ್ನು ಶ್ರೀಗಳು ರೂಪಿಸಿದ್ದರು. ಕಾವಿ ಹಾಕಿದವರೆಲ್ಲಾ ಸಂತರೇನಲ್ಲ. ಆದರೆ, ಸಂತರ ಹೆಸರಿಗೆ ಲವವೇಶವೂ ಕಳಂಕ ಬಾರದಂತೆ ಜೀವನ ನಡೆಸಿ ಮಾನವ ಕುಲಕ್ಕೆ ಆದರ್ಶಪ್ರಾಯ ರಾಗಿದ್ದವರು ಸಿದ್ಧಗಂಗಾ ಶ್ರೀಗಳು ಎಂದೂ ನಾಣಯ್ಯ ಸ್ಮರಿಸಿಕೊಂಡರು.

ಸಿದ್ಧಗಂಗಾ ಮಠದ ಉಪನ್ಯಾಸಕ ನಿರಂಜನ್ ಮಾತನಾಡಿ, ಕಣ್ಣಿಗೆ ಕಾಣುತ್ತಿದ್ದ, ನಡೆದಾಡುತ್ತಿದ್ದ ದೇವರಾಗಿ ಭಕ್ತಕೋಟಿಯ ಪಾಲಿಗಿದ್ದ ಶಿವಕುಮಾರಸ್ವಾಮೀಜಿಗಳು ದೇವರನ್ನು ನಂಬಿದ, ಆದರೆ ದೇವರನ್ನು ನೋಡದವರ ಪಾಲಿಗೆ ಸಾಕ್ಷಾತ್ ದೇವರಂತಿದ್ದರು. ತಮ್ಮೆಲ್ಲಾ ಸಮಯವನ್ನು ಸಮಾಜಕ್ಕಾಗಿ ನೀಡಿದ್ದ ಶ್ರೀಗಳು ಅಸಡ್ಡೆಯನ್ನು ಸಹಿಸುತ್ತಿರಲಿಲ್ಲ. ಹಾಗೆಂದು ಅಸಡ್ಡೆಯಿಂದ ವರ್ತಿಸಿದವರಿಗೆ ಬೈಯದೇ ತಾವೇ ಸ್ಥಳದಲ್ಲಿ ನಿಂತು ಸಿಬ್ಬಂದಿ ನಿರ್ವಹಿಸುವ ಕಾರ್ಯವನ್ನು ತಾವೇ ಮಾಡಲು ಮುಂದಾಗಿ ಅಸಡ್ಡೆಯಿಂದ ವರ್ತಿಸಿದವರಿಗೆ ಸೂಕ್ತ ಪಾಠ ಕಲಿಸುತ್ತಿದ್ದರು ಎಂದರು.ಯಾರು ಬೆಳಗ್ಗಿನ ನಿದ್ದೆಯನ್ನು ಗೆಲ್ಲುತ್ತಾರೋ ಅವರು ಶ್ರೇಷ್ಟ ವ್ಯಕ್ತಿಗಳಾಗಲು ಸಾಧ್ಯ ಎಂಬದಕ್ಕೆ ಶ್ರೀಗಳೇ ಅತ್ಯುತ್ತಮ ನಿದರ್ಶನ ಎಂದು ನಿರಂಜನ್ ಹೇಳಿದರು.

ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ಪ್ರಸನ್ನ ಸ್ವಾಗತಿಸಿ, ವಿಜಯಲಕ್ಷ್ಮೀ ಚೇತನ್ ನಿರೂಪಿಸಿ ದರು. ಲೀಲಾ ಮಂಜುನಾಥ್ ಪ್ರಾರ್ಥಿಸಿದರು. ಕಾರ್ಯದರ್ಶಿ ಜಗದೀಶ್ ವಂದಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಗಣ್ಯರು ಗೆಜ್ಜೆ ಸಂಗಪ್ಪ ಸಭಾಂಗಣದಲ್ಲಿದ್ದ ಶ್ರೀಗಳ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿದರು. ಶ್ರೀ ಬಸವೇಶ್ವರ ದೇವಾಲಯದಿಂದ ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಶ್ರೀಗಳ ಭಾವಚಿತ್ರದ ಮೆರವಣಿಗೆ ಸಾಗಿದ ಸಂದರ್ಭ ಮಹಿಳೆಯರು ಪೂರ್ಣ ಕುಂಭದೊಂದಿಗೆ ಪಾಲ್ಗೊಂಡಿದ್ದರು. ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳೂ ಮೆರವಣಿಗೆಯಲ್ಲಿ ಗಮನ ಸೆಳೆದವು.