ಮಡಿಕೇರಿ, ಮಾ. 10: ಸದ್ಯದಲ್ಲಿಯೇ ಲೋಕಸಭಾ ಚುನಾವಣೆ ದಿನಾಂಕ ಪ್ರಕಟ ವಾಗಲಿದ್ದು, ಚುನಾವಣೆ ಸಂಬಂಧ ಈಗಾಗಲೇ ನೋಡೆಲ್ ಅಧಿಕಾರಿ ಗಳನ್ನು ನಿಯೋಜಿಸಲಾಗಿದೆ. ಆ ದಿಸೆಯಲ್ಲಿ ನೋಡಲ್ ಅಧಿಕಾರಿಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿ ತಿಳಿದು ಕರ್ತವ್ಯ ಪ್ರಜ್ಞೆಯಿಂದ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 543 ಮತಗಟ್ಟೆ ಕೇಂದ್ರಗಳಿದ್ದು, ಈ ಮತಗಟ್ಟೆ ಕೇಂದ್ರಗಳ ಸುಸ್ಥಿತಿ ಸಂಬಂಧಿಸಿದಂತೆ ಈಗಾಗಲೇ ಸೆಕ್ಟೆರ್ ಅಧಿಕಾರಿಗಳು ವರದಿ ನೀಡಿದ್ದಾರೆ. ಇನ್ನೂ ಐದಾರು ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ, ರ್ಯಾಂಪ್, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯ ಕಲ್ಪಿಸಲು ಬಾಕಿ ಇರುವ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿಯೊಂದು ಇಲಾಖೆಗಳ ಸಿಬ್ಬಂದಿಯ ಮಾಹಿತಿ ವಿವರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಯಾರನ್ನೂ ಸಹ ಕೈಬಿಡದೆ ಮಾಹಿತಿ ಒದಗಿಸಬೇಕು. ಜೊತೆಗೆ ಸಿಬ್ಬಂದಿಗಳ ಬ್ಯಾಂಕ್ ಖಾತೆ ಹಾಗೂ ಎಪಿಕ್ ಕಾರ್ಡ್ ಮಾಹಿತಿ ಒದಗಿಸುವಂತೆ ಹಾಗೂ ಚುನಾವಣಾ ದಿನಾಂಕ ಪ್ರಕಟವಾದ ನಂತರ ಜಿಲ್ಲೆಯ ಹೆದ್ದಾರಿ ಫಲಕಗಳ ವಿನೈಲ್ ಸೇರಿದಂತೆ ಎಲ್ಲಾ ರೀತಿಯ ಪೋಸ್ಟರ್, ಬ್ಯಾನರ್ ತೆರವುಗೊಳಿಸುವ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳು ನಿರ್ವಹಿಸುವಂತೆ ತಿಳಿಸಿದ ಅವರು, ಯುವ ಹಾಗೂ ವಿಕಲಚೇತನ ಮತದಾರರ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು. ಮತಗಟ್ಟೆ ಸಿಬ್ಬಂದಿಗಳಿಗೆ ತರಬೇತಿ ನೀಡುವದು ಮತ್ತಿತರ ಅಂಶದ ಬಗ್ಗೆ ನಿರ್ದೇಶನ ನೀಡಿದರು.
ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ಕೆ.ಲಕ್ಷ್ಮಿಪ್ರಿಯ ಅವರು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಜಿಲ್ಲಾ, ತಾಲೂಕು, ಹೋಬಳಿ ಮತ್ತು ಗ್ರಾ.ಪಂ.ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು.
ಈಗಾಗಲೇ ಮತದಾರರ ಜಾಗೃತಿ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹಲವು ಗಮನಸೆಳೆಯುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು ಎಂದು ತಿಳಿಸಿದರು.
ನೋಡೆಲ್ ಅಧಿಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಿಇಒ ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್ ಅವರು ನೋಡೆಲ್ ಅಧಿಕಾರಿಗಳು ತಮ್ಮ ಜವಾಬ್ದಾರಿ ಯನ್ನು ಅರಿತು ಕಾರ್ಯ ನಿರ್ವಹಿಸ ಬೇಕು. ಚುನಾವಣಾ ಆಯೋಗದಿಂದ ಬರುವ ಆದೇಶ ಗಳನ್ನು ಪಾಲಿಸಬೇಕು. ಚುನಾವಣಾ ಆಯೋಗದಿಂದ ಬರುವ ನಿರ್ದೇಶನಗಳಿಗೆ ಸಂಬಂಧಿಸಿದಂತೆ ಪ್ರತಿನಿತ್ಯ ಮಾಹಿತಿ ಪಡೆಯು ವಂತಾಗಬೇಕು ಎಂದು ಅವರು ತಿಳಿಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಚುನಾವಣೆಗೆ ನಿಯೋಜಿಸಿರುವ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಡಯಟ್ ಪ್ರಾಂಶುಪಾಲರಾದ ವಾಲ್ಟರ್ ಡೆಮೆಲ್ಲೋ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೋ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆಂಚಪ್ಪ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಗೌರವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂಧತಿ, ತಹಶೀಲ್ದಾರರಾದ ಗೋವಿಂದ ರಾಜು, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಷಂಶುದ್ದೀನ್, ನೋಂದಣಿ ಇಲಾಖೆಯ ಅಧಿಕಾರಿ ಸಿದ್ದೇಶ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ತಮ್ಮಯ್ಯ, ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ಅಜೀತ್, ನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ವಿಕಲಚೇತನರ ಇಲಾಖೆ ಅಧಿಕಾರಿ ದೇವರಾಜು, ಇತರರು ಇದ್ದರು.