ಕುಶಾಲನಗರ, ಮಾ. 10: ಕುಶಾಲನಗರ ಪಟ್ಟಣ ಪಂಚಾಯಿತಿ 2019-20 ನೇ ಸಾಲಿನಲ್ಲಿ ರೂ. 3 ಲಕ್ಷದ ಉಳಿತಾಯ ಬಜೆಟ್ ಅನ್ನು ಮಂಡಿಸಲಾಯಿತು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಗೋವಿಂದರಾಜ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಪ್ರಸಕ್ತ ವರ್ಷದ ಬಜೆಟ್ ಮಂಡಿಸಿದರು. ವಿವಿಧ ಮೂಲಗಳಿಂದ 15.34 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ರೂ.15.31 ಕೋಟಿ ಖರ್ಚು ಅಂದಾಜಿಸಲಾಗಿದೆ. ರೂ.3 ಲಕ್ಷ ಉಳಿತಾಯವನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಪಟ್ಟಣದಲ್ಲಿ ನಾಗರಿಕರಿಗೆ ರಸ್ತೆ ದಾಟಲು ಅವಶ್ಯಕವಿರುವ 3 ಕಡೆಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ರೂ. 20 ಲಕ್ಷ, ಸಾರ್ವಜನಿಕ ಈಜುಕೊಳ ನಿರ್ಮಾಣಕ್ಕೆ ರೂ.20ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಯ ವಾಹನ ಖರೀದಿ ಮತ್ತು ಯಂತ್ರೋಪಕರಣಗಳಿಗಾಗಿ ಮಹಿಳೆಯರ ಅನುಕೂಲಕ್ಕಾಗಿ ವಿಶೇಷ ನ್ಯಾಪ್ಕೀನ್ ಬರ್ನಿಂಗ್ ಮಿಷನ್ ಖರೀದಿ ರೂ.11 ಲಕ್ಷ ಹಾಗೂ ತುತ್ತು ಚಿಕಿತ್ಸೆಗಾಗಿ ಆಕ್ಸಿಜನ್ ವ್ಯವಸ್ಥೆ ಯಂತಹ ಕಳೆದ ಸಾಲಿನ ಯೋಜನೆಗಳನ್ನು ಮುಂದುವರೆಸಲಾಗಿದೆ. ಇದರೊಂದಿಗೆ ನಗರ ಸ್ವಚ್ಛತೆಗಾಗಿ ರೂ.86 ಲಕ್ಷ ಹಣವನ್ನು ಮೀಸಲಿರಿಸಲಾಗಿದೆ. ನಿವೃತ್ತ ಯೋಧರ ಕ್ಷೇಮಾಭಿವೃದ್ಧಿಗಾಗಿ ರೂ.2 ಲಕ್ಷ, ಕಾವೇರಿ ನದಿ ಸ್ವಚ್ಛತೆಗಾಗಿ ರೂ.5 ಲಕ್ಷವನ್ನು ಮೀಸಲಿಡಲಾಗಿದೆ.
ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ರೂ.250 ಲಕ್ಷ, ನೌಕರರ ವೇತನಕ್ಕೆ 125 ಲಕ್ಷ ಮೀಸಲಾಗಿದ್ದು, ರಸ್ತೆ ಮತ್ತು ಪಾದಾಚಾರಿ ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ರೂ.51 ಲಕ್ಷ, ಚರಂಡಿ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ರೂ.39 ಲಕ್ಷ, ಉದ್ಯಾನವನ ಅಭಿವೃದ್ಧಿ ಮತ್ತು ಅರಣ್ಯೀಕರಣಕ್ಕಾಗಿ ರೂ.30.50 ಲಕ್ಷ, ದಾರಿದೀಪ ನಿರ್ವಹಣೆ ಮತ್ತು ದುರಸ್ಥಿಗಾಗಿ ರೂ.65.25 ಲಕ್ಷ, ಇತರೆ ನಾಗರೀಕ ಸೌಲಭ್ಯಗಳ ಅಭಿವೃದ್ಧಿಗಾಗಿ ರೂ.38 ಲಕ್ಷ, ಹೊಸ ಮನೆ ನಿರ್ಮಾಣ ಮತ್ತು ಕಚ್ಚಾದಿಂದ ಪಕ್ಕಾ ಮನೆ ನಿರ್ಮಾಣಕ್ಕಾಗಿ ರೂ. 5ಲಕ್ಷ, ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ರೂ.4 ಲಕ್ಷ, ಶೌಚಾಲಯ ನಿರ್ಮಾಣ ಸಹಾಯಧನ ರೂ.4 ಲಕ್ಷ, ಪಟ್ಟಣದಲ್ಲಿರುವ ಬಡಜನತೆ ಮತ್ತು ಎಸ್ಸಿ, ಎಸ್ಟಿ ಜನಾಂಗದವರಿಗೆ ವೈದ್ಯಕೀಯ ಹಾಗೂ ಅಂತ್ಯಸಂಸ್ಕಾರಕ್ಕಾಗಿ ಮತ್ತು ಕ್ರೀಡೆಗೆ ಸಹಾಯಧನ ರೂ.9 ಲಕ್ಷ, ಕಚೇರಿ ಉಪಕರಣಗಳಿಗಾಗಿ ರೂ.15 ಲಕ್ಷ, ಕುಶಾಲನಗರ ಪಟ್ಟಣಕ್ಕೆ 24ಘಿ7 ನೀರು ಸರಬರಾಜು ವ್ಯವಸ್ಥೆಗಾಗಿ ರೂ.20 ಲಕ್ಷ ಅನುದಾನವನ್ನು ಮೀಸಲಿರಿಸಲಾಗಿದೆ.
2019-20ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ ನಿರೀಕ್ಷಿತದ ಆದಾಯಗಳ ವಿವರ : ಎಸ್ಎಫ್ಸಿ ಅನುದಾನ ರೂ.120 ಲಕ್ಷ, 14ನೇ ಹಣಕಾಸು ಅನುದಾನ ರೂ.150 ಲಕ್ಷ, ವಿದ್ಯುತ್ ಅನುದಾನ ರೂ.90 ಲಕ್ಷ, ಬರ ಪರಿಹಾರ ರೂ.25 ಲಕ್ಷ, ವೇತನ ಅನುದಾನ ರೂ.126 ಲಕ್ಷ, ಕಟ್ಟಡ ಪರವಾನಿಗೆ ರೂ.15 ಲಕ್ಷ, ಆಸ್ತಿ ತೆರಿಗೆ ರೂ.137 ಲಕ್ಷ, ಉದ್ದಿಮೆ ಪರವಾನಿಗೆ ರೂ.15 ಲಕ್ಷ, ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗೆ ರೂ.14 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪ.ಪಂ. ಶ್ರೇಯೋಭಿವೃದ್ಧಿಗಾಗಿ ಕಾಯ್ದಿರಿಸಲಾದ ಶೇ.24.10 ನಿಧಿ ರೂ.31.33 ಲಕ್ಷ, ಇತರೆ ಬಡಜನರ ಕಲ್ಯಾಣ ಶ್ರೇಯೋಭಿವೃದ್ಧಿಗೆ ಶೇ.7.25 ನಿಧಿ ಯಡಿಯಲ್ಲಿ ರೂ.9.42 ಲಕ್ಷ, ಅಂಗವಿಕರಿಗೆ ಶ್ರೇಯೋಭಿವೃದ್ಧಿಗೆ ಶೇ.3ನಿಧಿ ಯಡಿಯಲ್ಲಿ ರೂ.6.50 ಲಕ್ಷ, ಕ್ರೀಡೆಗೆ ಸಹಾಯಧನ ರೂ.1.30 ಲಕ್ಷ ಸೇರಿದಂತೆ ಒಟ್ಟು 15 ಕೋಟಿ ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದು ಪ.ಪಂ.ಮುಖ್ಯಾಧಿಕಾರಿ ಸುಜಯ್ ಕುಮಾರ್ ತಿಳಿಸಿದರು. ಈ ಸಂದರ್ಭ ಪ.ಪಂ.ಸದಸ್ಯರಾದ ಅಮೃತ್ ರಾಜ್, ಬಿ.ಜಯವರ್ಧನ್, ಜಗದೀಶ್, ಸುರೇಶ್, ಎಂ.ಕೆ.ಸುಂದರೇಶ್, ರೂಪ ಉಮಾಶಂಕರ್, ಸುರೇಯಾಬಾನು, ಶೈಲಾ ಕೃಷ್ಣಪ್ಪ, ಜಯಲಕ್ಷ್ಮೀ, ಜಯಲಕ್ಷ್ಮಿನಂಜುಂಡಸ್ವಾಮಿ, ಜಯಲಕ್ಷ್ಮಮ್ಮ, ಕಿರಿಯ ಅಭಿಯಂತರೆ ಶ್ರೀದೇವಿ, ಪ್ರಥಮ ದರ್ಜೆ ಗುಮಾಸ್ತ ಸತೀಶ್ ಹಾಗೂ ಸಿಬ್ಬಂದಿಗಳು ಇದ್ದರು.