ಗೋಣಿಕೊಪ್ಪಲು, ಮಾ. 10: ಕೆಲವರು ಕನ್ನಡದ ನೆಲ ಹಾಗೂ ಭಾಷೆಯ ಬಗೆ ಬಂಡವಾಳ ವಾಗಿಸಿಕೊಂಡು ಕನ್ನಡ ಅಳಿದು ಹೋಗುತ್ತದೆ ಎಂಬ ಆತಂಕಕಾರಿ ಹೇಳಿಕೆಗಳನ್ನು ನೀಡುತ್ತಾ ಕನ್ನಡದ ಮನಸ್ಸುಗಳ ಮೇಲೆ ಆಘಾತವನ್ನು ನೀಡುತ್ತಿದ್ದಾರೆ ಎಂದು ಕವಿ, ಸಾಹಿತಿ ಜಗದೀಶ್ ಜೋಡುಬೀಟಿ ವಿಷಾದ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅರಣ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ದಿ. ಎಂ.ಜಿ. ಪದ್ಮನಾಭ ಕಾಮತ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗೆಗೆ ವಾಣಿಜ್ಯೋದ್ಯಮಿಗಳ ಕೊಡುಗೆ ಎಂಬ ವಿಚಾರವಾಗಿ ಮಾತನಾಡಿದರು.
ಕನ್ನಡ ಅಳಿದು ಹೋಗುತ್ತದೆ ಎನ್ನುವದು ಕೆಲವರ ಬಾಯಿ ಚಪಲ ಮತ್ತು ಬಂಡವಾಳ ಎಂದು ಹೇಳಬಹುದು. 2 ಸಾವಿರ ವರ್ಷಗಳ ಹಿಂದೆಯೇ ಕನ್ನಡ ಭಾಷೆ ಸಂಸ್ಕøತಿ ಹುಟ್ಟಿಕೊಂಡಿದೆ ಇಂತಹ ಭಾಷೆಯನ್ನು ಪರ ಭಾಷೆಗಳ ಪ್ರಭಾವದಿಂದ ಅಳಿದುಹೊಗುತ್ತಿದೆ ಎಂದು ಹೇಳುತ್ತಿ ರುವದು ಶುದ್ಧ ಸುಳ್ಳು ಅನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಚಕ್ಕೇರ ಮುತ್ತಣ್ಣ, ಚಿರಿಯಪಂಡ ಕುಶಾಲಪ್ಪ, ಡಾ. ಮೇಚಿರ ನಾಣಯ್ಯ ಹಾಗೂ ಮಲ್ಲಂಡ ನಂಜಪ್ಪ ಅವರ ಕನ್ನಡ ಪರ ಚಟುವಟಿಕೆ ಮತ್ತು ಜೀವನ ಆಧರಿತ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಚಾಲನೆ ನೀಡಿದರು. ವಿದ್ಯಾರ್ಥಿಗಳು ಕನ್ನಡದ ಇತಿಹಾಸದ ಬಗೆ ತಿಳಿದುಕೊಂಡು ಕನ್ನಡದ ಬಗೆ ಅಭಿಮಾನ ಮೂಡಿಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಸಾಹಿತ್ಯ ಪರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಕನ್ನಡ, ನಾಡು ನುಡಿಗಾಗಿ ಶ್ರಮಿಸಿದ ಮಹನೀಯರನ್ನು ನೆನೆಸಿಕೊಳ್ಳಲು ದತ್ತಿ ಉಪನ್ಯಾಸ ಕಾರ್ಯಕ್ರಮದಿಂದ ಸಾಧ್ಯವಾಗುತ್ತಿದೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ ಬೆಳವಣಿಗೆಗೆ ವ್ಯಾಪಾರಸ್ಥರ ಕೊಡುಗೆ ಅಪಾರವಾದದ್ದು ಎಂದು ಹೇಳಿದರು.
ಅರಣ್ಯ ಮಹಾ ವಿದ್ಯಾಲಯದ ಡೀನ್, ಚೆಪ್ಪುಡೀರ ಕುಶಾಲಪ್ಪ ಮಾತನಾಡಿ ದತ್ತಿ ಉಪನ್ಯಾಸದ ಮೂಲಕ ಸಾಹಿತ್ಯದ ಚಿಂತಕರನ್ನು ನೆನೆಸಿಕೊಳ್ಳುವದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಹಾಗೂ ದತ್ತಿ ದಾನಿಗಳಾದ ಎಂ.ಪಿ. ಕೇಶವ ಕಾಮತ್ ಮಾತನಾಡಿ ಸಮಾಜಕ್ಕೆ ನಮ್ಮ ಕೊಡುಗೆಯ ಬಗೆ ನಮ್ಮ ಮುಂದಿನ ತಲೆಮಾರಿನವರು ನೆನೆಸಿಕೊಳ್ಳುವ ಕಾರ್ಯ ಮಾಡಬೇಕು.
ತಾ.ಕ.ಸ.ಪ. ಕಾರ್ಯದರ್ಶಿ ನಳಿನಾಕ್ಷಿ, ನಿರ್ದೇಶಕ ವೈಲೇಶ್, ಉಪಸ್ಥಿತರಿದ್ದರು. ಸ್ವಾಗತ ಹಾಗೂ ನಿರೂಪಣೆ ಚಮ್ಮಟೀರ ಪ್ರವೀಣ್ ಹಾಗೂ ವಂದನಾರ್ಪಣೆಯನ್ನು ರೇಖಾ ಶ್ರೀಧರ್ ನೆರೆವೇರಿಸಿದರು.
- ಎನ್.ಎನ್. ದಿನೇಶ್