ಸೋಮವಾರಪೇಟೆ, ಮಾ.9: ಮುಂದಿನ ತಲೆಮಾರಿಗೆ ಕನ್ನಡ ಭಾಷೆ, ಸಾಹಿತ್ಯ, ಪರಂಪರೆಯನ್ನು ತೆಗೆದುಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿ ಯುವ ಜನಾಂಗದ ಮೇಲಿದ್ದು, ಮೊದಲಿಗೆ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಯುವ ಜನಾಂಗಕ್ಕೆ ಅಭಿಮಾನ ಮೂಡಬೇಕು ಎಂದು ಹಿರಿಯ ಸಾಹಿತಿ, ಚುಟುಕು ಕವಿ ದುಂಡಿರಾಜ್ ಆಶಯ ವ್ಯಕ್ತಪಡಿಸಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಶಾಲನಗರ ಹೋಬಳಿ ಘಟಕ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಥಮ ಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.ಯುವ ಜನಾಂಗ ಕನ್ನಡ ಭಾಷಾ ಸಾಹಿತ್ಯದ ಬಗ್ಗೆ ಅಭಿಮಾನ ಹೊಂದಬೇಕು. ಕನ್ನಡ ಸಾಹಿತ್ಯವನ್ನು ಯುವ ಜನಾಂಗವೇ ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಸಾಹಿತ್ಯವನ್ನು ಆರ್ಥಿಕ ಲಾಭದಲ್ಲಿ (ಮೊದಲ ಪುಟದಿಂದ) ನೋಡುವದನ್ನು ಮೊದಲು ತ್ಯಜಿಸಬೇಕು. ಯುವ ಜನಾಂಗದಲ್ಲಿ ಕನ್ನಡದ ಪ್ರೀತಿ ಮೂಡುವಂತಾಗಬೇಕು ಎಂದು ಆಶಿಸಿದ ದುಂಡಿರಾಜ್,ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತ ನಾಡುವವರೇ ಕಡಿಮೆಯಾಗುತ್ತಿದ್ದಾರೆ ಎಂದು ವಿಷಾಧಿಸಿದರು.

ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿದ್ದ ಅರಶಿನಗುಪ್ಪೆ ಸಿದ್ದಲಿಂಗ ಪುರದ ಮಂಜುನಾಥ ಸ್ವಾಮಿ ಕ್ಷೇತ್ರದ ಶ್ರೀ ರಾಜೇಶ್‍ನಾಥ್ ಗುರೂಜಿ ಮಾತನಾಡಿ, ಜ್ಞಾನ, ವಿಜ್ಞಾನ, ತಂತ್ರಜ್ಞಾನದೊಂದಿಗೆ ಸಾಹಿತ್ಯದ ಜ್ಞಾನ ಎಲ್ಲರಿಗೂ ಅವಶ್ಯಕ. ಸಾಹಿತ್ಯದಿಂದ ಮಾತ್ರ ಜ್ಞಾನ ದೊರಕುತ್ತದೆ. ಕನ್ನಡ ಶಾಲೆ, ಅಂಗನವಾಡಿಗಳ ಸ್ಥಿತಿಯನ್ನು ಸುಧಾರಿಸುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವತ್ತ ಸಾಂಘಿಕ ಪ್ರಯತ್ನ ಆಗಬೇಕು ಎಂದರು. ಯುವ ಜನಾಂಗ ಸಾಹಿತ್ಯ ದಿಂದ ದೂರ ಉಳಿಯ ಬಾರದು. ಸಾಹಿತ್ಯವು ಅಂತರ್ಗತ ಜ್ಞಾನವನ್ನು ಜಾಗೃತಗೊಳಿಸುವ ಸಾಧನವಾಗಿದೆ. ವಿದ್ಯಾರ್ಜನೆ ಸಾಧನೆಯ ಮಾರ್ಗವೇ ಹೊರತು ಹಣ ಸಂಪಾದನೆಯ ಮಾರ್ಗ ಆಗಬಾರದು ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕರ್ನಾಟಕ ಗಡಿಭಾಗಗಳಲ್ಲಿ ಕನ್ನಡ ಸಾಹಿತ್ಯ, ಭಾಷೆಯ ಉಳಿವಿಗೆ ಹೆಚ್ಚಿನ ಅನುದಾನ ನೀಡಲು ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ತಾನು ವಿಧಾನ ಪರಿಷತ್‍ನಲ್ಲಿ ಸರ್ಕಾರದ ಗಮನ ಸೆಳೆಯುವದಾಗಿ ತಿಳಿಸಿದರು. ಪ್ರತಿಯೋರ್ವರೂ ಕನ್ನಡ ಪತ್ರಿಕೆಗಳನ್ನು ಓದಬೇಕು. ಸಾಹಿತ್ಯ, ಜಾನಪದ, ನಾಟಕ, ಚಲನಚಿತ್ರಗಳತ್ತ ಆಸಕ್ತಿ ಹೊಂದುವ ಮೂಲಕ ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವಂತಾ ಗಬೇಕು ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಮ್ಮೇಳನದ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ತುಂಬುವ ಕಾರ್ಯ ನಡೆದಿರುವದು ಶ್ಲಾಘನೀಯ ಎಂದರಲ್ಲದೇ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರ ಬೇಡಿಕೆಯಂತೆ ಕಾಲೇಜಿಗೆ 20 ಕಂಪ್ಯೂಟರ್‍ಗಳನ್ನು ಒದಗಿಸುವದಾಗಿ ಭರವಸೆ ನೀಡಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಹಳೆ ಗನ್ನಡ, ಹೊಸ ಗನ್ನಡ ಮಾದರಿಯಲ್ಲಿಯೇ ಅಂತರ್ಜಾಲ ಕನ್ನಡದ ಅಗತ್ಯತೆ ಹೆಚ್ಚಿದೆ. ಕನ್ನಡದ ಹಲವಷ್ಟು ಪದಗಳ ಬಗ್ಗೆ ಅಂತರ್ಜಾಲ ದಲ್ಲಿ ಅಸಂಬದ್ಧ ಅರ್ಥಗಳು ಅಡಕವಾಗಿದ್ದು, ಇವುಗಳನ್ನು ಬದಲಾಯಿಸಬೇಕಿದೆ. ಕೃತಿಗಳ ಅಧ್ಯಯನದಿಂದ ಮಾತ್ರ ಸ್ವಯಂ ಸಾಹಿತ್ಯ ಕೃಷಿ ಕೈಗೊಳ್ಳಲು ಸಾಧ್ಯ. ಯುವ ಜನಾಂಗ ಎಲ್ಲಾ ಧರ್ಮಗಳ ಸಾರವನ್ನು ಅರಿಯಬೇಕು. ಎಲ್ಲಾ ರಂಗಗಳ ಮೇಲೂ ಬೆಳಕು ಚೆಲ್ಲುವ ಸಾಹಿತ್ಯ ಕೃಷಿ ಹೆಚ್ಚು ನಡೆ ಯಬೇಕು ಎಂದು ಅಭಿಪ್ರಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಹಲವಷ್ಟು ರಾಜಕಾರಣಿಗಳೇ ಖಾಸಗಿಯಾಗಿ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಪರಿಣಾಮ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಯಿಂದ ಮುಚ್ಚುವ ಹಂತಕ್ಕೆ ತಲುಪಿವೆ ಎಂದು ವಿಷಾದಿಸಿದರು. ಯುವ ಜನಾಂಗದಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಯುವ ಸೌರಭ ಆಯೋಜಿಸಲಾಗಿದೆ ಎಂದರು. ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಕೆಂಪೇಗೌಡ, ಹಿರಿಯ ಸಾಹಿತಿ ಬೆಸೂರು ಮೋಹನ್ ಪಾಳೇಗಾರ್, ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ ಅವರುಗಳು ಮಾತನಾಡಿದರು.

ವೇದಿಕೆಯಲ್ಲಿ ಸೋಮವಾರ ಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಕುಶಾಲನಗರ ಹೋಬಳಿ ಅಧ್ಯಕ್ಷ ರಂಗಸ್ವಾಮಿ, ನಿವೃತ್ತ ಪ್ರಾಂಶುಪಾಲ ಶಿವಪ್ಪ, ಕಸಾಪ ಜಿಲ್ಲಾ ಗೌ. ಕಾರ್ಯದರ್ಶಿ ರಮೇಶ್, ಕೋಶಾಧ್ಯಕ್ಷ ಮುರುಳೀಧರ್, ಪ್ರಮುಖರಾದ ಎ.ಪಿ. ವೀರರಾಜು, ಉ.ರಾ. ನಾಗೇಶ್, ನಾಗರಾಜ ಶೆಟ್ಟಿ, ರವೀಂದ್ರ ರೈ, ಕನ್ನಡ ಪರ ಸಂಘಟನೆಗಳ ಮುಖಂಡರಾದ ವೆಂಕಟೇಶ್ ಪೂಜಾರಿ, ಕೃಷ್ಣ, ಅಣ್ಣಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾದಂಬರಿ ಬಿಡುಗಡೆ: ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬೆಸೂರು ಮೋಹನ್ ಪಾಳೇಗಾರ್ ಅವರು ರಚಿಸಿರುವ ‘ಭಾವ ದೀಪ್ತಿ’ ಕಾದಂಬರಿಯನ್ನು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಬಿಡುಗಡೆಗೊಳಿಸಿದರು.