ಗೋಣಿಕೊಪ್ಪ ವರದಿ, ಮಾ. 9: ವಾಹನದ ಮೇಲೆ ಕಾಡಾನೆ ದಾಳಿ ನಡೆಸಿ ವಾಹನ ಜಖಂಗೊಂಡಿರುವ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ವಾಹನ ಚಲಾಯಿಸುತ್ತಿದ್ದ ನಿಟ್ಟೂರು ಗ್ರಾಮದ ಮಹೇಶ್ (28) ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಜೀವಪಾಯದಿಂದ ಪಾರಾಗಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಯಿಂದ ಕಾರ್ಮಿಕರನ್ನು ಕರೆದುಕೊಂಡು ಬರಲು ಮಾರುತಿ ವ್ಯಾನ್ನಲ್ಲಿ ತಟ್ಟೆಕೆರೆಗೆ ತೆರಳುತ್ತಿದ್ದ ಸಂದರ್ಭ ಬೆಂಡೆಕುತ್ತಿ ಎಂಬಲ್ಲಿ ಕಿರಿದಾದ ರಸ್ತೆಯಲ್ಲಿ ತೋಟದಿಂದ ಬಂದ ಕಾಡಾನೆ ವಾಹನದ ಮೇಲೆ ದಾಳಿ ನಡೆಸಿದೆ. ಕೋರೆಯಲ್ಲಿ ಚುಚ್ಚಿದ ಪರಿಣಾಮ ವಾಹನದ ಮುಂಭಾಗ ಜಖಂಗೊಂಡಿದೆ. ಮಹೇಶ್ ಅವರ ಕಾಲು ಹಾಗೂ ಕೈಗೆ ಸಣ್ಣಮಟ್ಟದ ಗಾಯವಾಗಿದೆ. ನಾಗರಹೊಳೆ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆನೆ ದಾಳಿ ನಡೆಸಿ ಮತ್ತೆ ತೋಟಕ್ಕೆ ಸೇರಿಕೊಂಡಿತು. ಮತ್ತೆ ದಾಳಿಗೆ ಮುಂದಾಗದ ಕಾರಣ ನನ್ನ ಜೀವ ಉಳಿಯುವಂತಾಯಿತು ಎಂದು ಮಹೇಶ್ ಪತ್ರಿಕೆಯೊಂದಿಗೆ ಭಯದಿಂದ ಹೇಳಿಕೊಂಡರು. -ಸುದ್ದಿಪುತ್ರ