ಗೋಣಿಕೊಪ್ಪಲು, ಮಾ. 7: ಕೊಡಗು ಜಿಲ್ಲೆಗೆ ಎಂ.ಬಿ.ಬಿ.ಎಸ್. ಮಾಡಿರುವ ಅಲೋಪತಿ ವೈದ್ಯರುಗಳು ಬರಲು ನಿರಾಕರಿಸುತ್ತಿದ್ದು, ಹೆಚ್ಚಿನ ಭಾಗದಲ್ಲಿ ಆಯುಷ್ ವೈದ್ಯರು ಗಳನ್ನು ನೇಮಕ ಮಾಡಲಾಗಿದೆ. ಆಯುರ್ವೇದ ಪದ್ಧತಿಯ ಮೂಲಕ ಆಯುಷ್ ವೈದ್ಯರು ಚಿಕಿತ್ಸೆ ನೀಡಲು ಹಾಗೂ ಔಷಧಿ ವಿತರಣೆ ಮಾಡಲು ಸರ್ಕಾರಿ ಆಸ್ಪತ್ರೆಗಳಿಗೆ ಯಾವದೇ ಆಯುರ್ವೇದ ಔಷಧಿ ವಿತರಣೆ ಯಾಗುತ್ತಿಲ್ಲ. ಆಯುಷ್ ವೈದ್ಯರು ಲಭ್ಯವಿರುವ ಅಲೋಪತಿ ಔಷಧಿ ಗಳನ್ನೇ ರೋಗಿಗಳಿಗೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ವೀರಾಜಪೇಟೆ ತಾಲೂಕಿನ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 6 ಆಯುಷ್ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಆಂಗ್ಲ ಪದ್ಧತಿಯ ಔಷಧಿಯನ್ನೇ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಸರ್ಕಾರಿ ಆಸ್ಪತ್ರೆಗಳಿಗೂ ಅಗತ್ಯ ಆಯುರ್ವೇದ ಔಷಧಿ ವಿತರಣೆ ಮಾಡು ವಂತಾಗಬೇಕು ಎಂದು ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅಭಿಪ್ರಾಯ ಪಟ್ಟರು.
ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು ಹಾಗೂ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಅಲ್ಲಿನ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತ ನಾಡಿದರು. ಆಯುರ್ವೇದ ಚಿಕಿತ್ಸಾ ಪದ್ಧತಿ ಮತ್ತು ಅಲೋಪತಿಯಲ್ಲಿ ಉತ್ತಮ ಚಿಕಿತ್ಸಾ ಪದ್ಧತಿಯನ್ನು ಇದೀಗ ಸರ್ಕಾರಿ ಆಸ್ಪತ್ರೆಗಳು ಅಳವಡಿಸಿ ಕೊಂಡಿರುವದರಿಂದ ಜನತೆಗೆ ಎಚ್ಚು ಲಾಭದಾಯಕವಾಗಿದೆ ಎಂದರು.
ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ ಸುಮಾರು ರೂ. 2 ಸಾವಿರ ಮೌಲ್ಯದ ಔಷಧಿ ಇರುವ ‘ಕಿಟ್’ ಅನ್ನು ಫಲಾನುಭವಿಗಳಿಗೆ ವಿತರಿಸುವ ಮೂಲಕ ಉದ್ಘಾಟನೆ ನೆರವೇರಿಸ ಲಾಯಿತು. ಮೈಸೂರು ಆಯುರ್ವೇದ ಕಾಲೇಜಿನ ಡಾ. ಮೈತ್ರಿ ಮಾತನಾಡಿ, ಆಯುರ್ವೇದ ಗುಣವುಳ್ಳ ರಸಾಯನ, ಲೇಹ್ಯ, ತೈಲ ಹಾಗೂ ಔಷಧಿಗಳನ್ನು ದಿನನಿತ್ಯ ಸೇವಿಸುವದರಿಂದ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು. ಗ್ರಾಮೀಣ ಭಾಗದಲ್ಲಿ ಆಯುರ್ವೇದ ಪದ್ಧತಿಯನ್ನು ಪ್ರಚಾರ ಪಡಿಸಲು ಸುಮಾರು 16 ಬಗೆಯ ಅಗತ್ಯ ಔಷಧಿಯನ್ನು ವಿತರಿಸಲಾಗುತ್ತಿದೆ. ಯಾವದೇ ರೀತಿಯ ರೋಗ ಗಳಿಗೂ ಆಯುರ್ವೇದದಲ್ಲಿ ಚಿಕಿತ್ಸೆ ಇದ್ದು, ಮೈಸೂರು ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡಲಾಗುತ್ತಿದೆ. ಇದರ ಸದುಪಯೋಗಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ. ರಾಮಲಿಂಗ ಊಗಾರ್ ಹಾಗೂ ಡಾ. ಆಶಾ ಮಾತನಾಡಿದರು. ಸ್ವಾಗತ, ನಿರೂಪಣೆಯನ್ನು ಸಂಯೋಜಕ ಟಿ.ಎಲ್. ಶ್ರೀನಿವಾಸ್ ನೆರವೇರಿಸಿದರು.
ಮೈಸೂರು ಆಯುರ್ವೇದ ಕಾಲೇಜಿನ ಡಾ. ಪ್ರಫುಲ್ಲಾ, ಡಾ. ಉಮಾ, ಡಾ. ಚೈತ್ರ, ಡಾ. ರೋಹಿತ್, ಕಾವ್ಯ, ತಾರಾ, ಹರ್ಷಿತಾ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.
 
						