ಮಡಿಕೇರಿ, ಮಾ. 8: ಕಳೆದ ಹಲವಾರು ವಷರ್Àಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಹೈಟೆಕ್ ಮಾರುಕಟ್ಟೆ ಕಾಮಗಾರಿಯಲ್ಲಿನ ಲೋಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ನಡೆಸಿದ ಹೋರಾಟದ ಫಲವಾಗಿ ಸೂಕ್ತ ಸ್ಪಂದನೆ ನೀಡಿ ಕಳಪೆ ಕಾಮಗಾರಿ ನಡೆಯದಂತೆ ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಮತ್ತು ನಗರಸಭಾ ಉಪಾಧ್ಯಕ್ಷರ ಪ್ರಯತ್ನ ಶ್ಲಾಘನೀಯವೆಂದು ಮಾರ್ಕೆಟ್ ಸಂತೆ ವ್ಯಾಪಾರಿಗಳ ಹಿತರಕ್ಷಣಾ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಎಂ.ಎ. ರಜಾಕ್ ನಗರಸಭೆಯ ಎಸ್‍ಡಿಪಿಐ ಸದಸ್ಯರು ಹಾಗೂ ಸಂತೆ ವ್ಯಾಪಾರಿಗಳು ಹೋರಾಟದ ಮನೋಭಾವದಿಂದ ಮುನ್ನುಗಿದ ಪರಿಣಾಮವಾಗಿ ಸಾರ್ವಜನಿಕರ ಹಣ ಪೋಲಾಗುವದು ಸ್ಥಗಿತಗೊಂಡು ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುತ್ತಿದೆ ಎಂದರು.
ಮಾರುಕಟ್ಟೆಯ ಕಳಪೆ ಕಾಮಗಾರಿ ಮತ್ತು ನಗರಸಭೆಯ ವೈಫಲ್ಯತೆ ವಿರುದ್ಧ ಸಮಿತಿ ಹಾಗೂ ನಗರಸಭೆ ಸದಸ್ಯರಾದ ಅಮಿನ್ ಮೊಹಿಸಿನ್, ಕೆ.ಜೆ. ಪೀಟರ್ ಅವರ ನೇತೃತ್ವದಲ್ಲಿ ನಗರಸಭೆÉ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಆದರೆ ನಗರಸಭಾ ಸದಸ್ಯರೊಬ್ಬರ ಪ್ರತಿಷ್ಟೆಯಿಂದಾಗಿ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲವೆಂದು ಆರೋಪಿಸಿದರು.
ನಗರಸಭೆಯ ನಿರ್ಲಕ್ಷ್ಯದಿಂದ ಬೇಸತ್ತು ಫೆ.13 ರಂದು ಜಿಲ್ಲಾಧಿಕಾರಿಗಳನ್ನು ಸಮಿತಿ ಸದಸ್ಯರು ಭೇಟಿ ಮಾಡಿ ಮಾರುಕಟ್ಟೆಯ ಕಳಪೆ ಕಾಮಗಾರಿಯ ಬಗ್ಗೆ ವಿವರಿಸಿ ಮನವಿ ನೀಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮರುದಿನವೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ, ಗುತ್ತಿಗೆ ನಿಯಮದಂತೆ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು ಎಂದು ರಜಾಕ್ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಬಿ.ಎಂ. ರಮೇಶ್, ಎಂ.ಎ. ಅಬ್ದುಲ್ ರೆಹೆಮಾನ್ ಹಾಗೂ ಮೊಹಮ್ಮದ್ ಆಲಿ ಉಪಸ್ಥಿತರಿದ್ದರು.