ಮಡಿಕೇರಿ, ಮಾ. 8:ಅಯೋಧ್ಯೆ ಸಮಸ್ಯೆ ಪರಿಹಾರ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯ ಸೂತ್ರವೊಂದನ್ನು ಪ್ರಕಟಿಸಿದ್ದು, 3 ಮಂದಿ ತಜ್ಞರ ಸಮಿತಿಯನ್ನು ರಚಿಸಿದೆ.ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ 68 ವರ್ಷ ಪ್ರಾಯದ ಎಫ್.ಎಂ. ಇಬ್ರಾಹಿಂ ಖಲೀಫುಲ್ಲಾ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಬೆಂಗಳೂರಿನ ಆಧ್ಯಾತ್ಮಿಕ ಗುರು 62 ವರ್ಷದ ಶ್ರೀ ಶ್ರೀ ರವಿಶಂಕರ್ ಹಾಗೂ ಹಿರಿಯ ನ್ಯಾಯಾಧೀಶ 69 ವಯಸ್ಸಿನ ಶ್ರೀರಾಂ ಪಂಚು ಇವರುಗಳು ಸದಸ್ಯರಾಗಿದ್ದಾರೆ.

ಇಂದು ಈ ಸಮಿತಿ ರಚನೆ ಕುರಿತು ಪ್ರಕಟಿಸಿದ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಾಧೀಶ ರಂಜನ್ ಗೊಗಾಯ್ ಅವರು ಸಮಿತಿ ರಚನೆಯಿಂದ ಕಾನೂನು ತೊಡಕು ಉಂಟಾಗುವದಿಲ್ಲ ಎಂದು ಅಭಿಪ್ರಾಯಪಟ್ಟರು. ಗೊಗಾಯ್ ಅವರನ್ನು ಒಳಗೊಂಡ 5 ಮಂದಿ ಸದಸ್ಯರ ಪೀಠ, ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ಸಮಸ್ಯೆ ಕುರಿತ ಎಲ್ಲಾ ಅರ್ಜಿದಾರರನ್ನು ನೂತನ ಸಮಿತಿ ಭೇಟಿಯಾಗಿ ಸೌಹಾರ್ದಯುತ ಪರಿಹಾರಕ್ಕೆ ಪ್ರಯತ್ನಿಸಲಿದೆ ಎಂದಿತು.

ಸಮಸ್ಯೆ ಇರುವದು ಜಾಗದ್ದಲ್ಲ. ಬದಲು ಮನಸ್ಸು ಹೃದಯ ಮತ್ತು ಸಾಧ್ಯವಾದರೆ ಪರಿಹಾರ ನಂಬಿಕೆ ಮತ್ತು ಭಾವನೆಗಳದ್ದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು. ನೂತನ ಸಮಿತಿ ಅಗತ್ಯ ವಿದ್ದಲ್ಲಿ ಹೆಚ್ಚು ಸದಸ್ಯರನ್ನು ಸೇರ್ಪಡೆ ಗೊಳಿಸಲು ಅವಕಾಶವನ್ನು ಕೋರ್ಟ್ ಕಲ್ಪಿಸಿತು.