ಮಡಿಕೇರಿ, ಮಾ. 8: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸೇರಿದಂತೆ ಇತರ ಜನಪ್ರತಿನಿಧಿಗಳು, ಸಾರ್ವಜನಿಕರು ಇಂದು ಇಲ್ಲಿನ ತಾಲೂಕು ಕಚೇರಿಗೆ ದಿಢೀರ್ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು. ಶುಕ್ರವಾರ ಇಂದು ವಿವಿಧ ಕೆಲಸ ಕಾರ್ಯಗಳಿಗಾಗಿ; ತಾಲೂಕು ಕಚೇರಿಗೆ ಆಗಮಿಸಿದರೆ, ತಹಶೀಲ್ದಾರ್ ಸಹಿತ ಸಿಬ್ಬಂದಿಗಳಿಲ್ಲದೆ ಯಾವದೇ ಕೆಲಸ ಆಗುತ್ತಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಶುಕ್ರವಾರ ಮಡಿಕೇರಿ ಸಂತೆ ದಿನವಾಗಿದ್ದು, ದೂರದ ಹಳ್ಳಿಗಳಿಂದ ಬೇರೆ ಬೇರೆ ಸಮಸ್ಯೆಗಳಿಗೆ ಸ್ಪಂದಿಸುವ ಆಶಯಹೊತ್ತು ತಾಲೂಕು ಕಚೇರಿಗೆ ಬಂದಾಗ, ಅಧಿಕಾರಿಗಳ ಸಹಿತ ಸಿಬ್ಬಂದಿ ಸ್ಪಂದಿಸುತ್ತಿಲ್ಲವೆಂದು ಗ್ರಾಮೀಣ ಮಂದಿ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿ.ಪಂ. ಅಧ್ಯಕ್ಷರ ಬಳಿ ಅಸಹಾಯಕತೆ ತೋಡಿಕೊಂಡರು. ಈ ವೇಳೆ ಸ್ವತಃ ಶಾಸಕರೇ ಗ್ರಾಮೀಣ ಜನತೆಯ ಒಡಗೂಡಿ ತಹಶೀಲ್ದಾರ್ ಕಚೇರಿಗೆ ಧಾವಿಸಿದರು.ಈ ವೇಳೆ ಯಾರೊಬ್ಬರೂ ಇಲ್ಲದ್ದರಿಂದ ಕೈ ಬೆರಳೆಣಿಕೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ; ಇತರರು ಧಿಕ್ಕಾರದ ಘೋಷಣೆ ಕೂಗಿದರು. ಹೊರ ಜಿಲ್ಲೆಯ ಯುವಕನೊಬ್ಬ ಮಾಜಿ ವಿಧಾನಸಭಾ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಜಿ. ಬೋಪಯ್ಯ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದನ್ನು ಗಮನಿಸಿ, ಅತ್ತ ಬಂದು ಅಚ್ಚರಿ ವ್ಯಕ್ತಪಡಿಸಿದ. ಈ ವೇಳೆ ಪ್ರಮುಖರೊಬ್ಬರು ಆತನಿಗೆ ಕಪಾಳಮೋಕ್ಷ ನೀಡಿ ಅಲ್ಲಿಂದ ಅಟ್ಟಿದ ದೃಶ್ಯವೂ ಎದುರಾಯಿತು.ಜಿಲ್ಲಾಧಿಕಾರಿ ಸ್ಪಂದನ : ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಹಶೀಲ್ದಾರರನ್ನು ಒಳಗೊಂಡಂತೆ ಅಧಿಕಾರಿಗಳ ಸಭೆಯು ಈ ವೇಳೆ ಜಿಲ್ಲಾ ಆಡಳಿತ ಭವನದಲ್ಲಿ ಜರುಗುತ್ತಿತ್ತು. ಪ್ರತಿಭಟನೆಯ ವಿಷಯ ತಿಳಿದು ಅವರು ಕೂಡಲೇ ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ತೆರಳಲು ಸೂಚಿಸಿದರು.ತಹಶೀಲ್ದಾರ್ ಸ್ಪಷ್ಟನೆ : ಕೂಡಲೇ ಧಾವಿಸಿ ಬಂದ ತಹಶೀಲ್ದಾರ್ ನಟೇಶ್ ತಾನು ಕೇವಲ ಒಂದು ವಾರ ಹಿಂದೆ ಇಲ್ಲಿಗೆ ಆಗಮಿಸಿದ್ದು, ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವದಾಗಿ ಸ್ಪಷ್ಟಪಡಿಸಿದರು. ಕಚೇರಿ ಸಿಬ್ಬಂದಿಗಳ ಕೊರತೆ ನಡುವೆಯೂ ಜನತೆಯ ಸಮಸ್ಯೆಗಳನ್ನು ಸರಿಪಡಿಸಲು ಪ್ರಾಮಾಣಿಕ ರೀತಿ ಸ್ಪಂದಿಸುತ್ತಿರುವದಾಗಿ ಸಮಜಾಯಿಷಿಕೆ ನೀಡಿದರು.
ಸಂತ್ರಸ್ತರಿಗೆ ಪರಿಹಾರ ಕಾರ್ಯ ಇತ್ಯಾದಿ ವಿಳಂಬ ಆಗಿರುವದು ಅರಿವಿಗೆ ಬಂದಿದ್ದು, ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಸಾರ್ವಜನಿಕ ಕುಂದುಕೊರತೆ ಗಮನಿಸುತ್ತಿರುವದಾಗಿ ಶಾಸಕರ ಗಮನಕ್ಕೆ ತಂದರು. ಜನರಿಗೆ ಆರ್‍ಟಿಸಿ, ಪ್ರಮಾಣ ಪತ್ರ ಇತ್ಯಾದಿ ತುರ್ತು ಕೆಲಸಗಳಿಗೆ ನಿಗಾವಹಿಸುವಂತೆ ಶಾಸಕರು ಸಲಹೆ ನೀಡಿದರು. ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ, ಜಿ.ಪಂ. ಸದಸ್ಯರುಗಳಾದ ಮುರುಳಿ ಕರುಂಬಮ್ಮಯ್ಯ, ಯಾಲದಾಳು ಪದ್ಮಾವತಿ, ಪಕ್ಷದ ಪದಾಧಿಕಾರಿಗಳಾದ ತಳೂರು ಕಿಶೋರ್, ಬೆಲ್ಲು ಸೋಮಯ್ಯ, ಸುಭಾಷ್ ಸೋಮಯ್ಯ, ಡೀನ್ ಬೋಪಣ್ಣ, ಉಮಾ ಪ್ರಭು, ಕೊಕ್ಕಲೆರ ಅಯ್ಯಪ್ಪ ಸೇರಿದಂತೆ ಅನೇಕ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.