ಶನಿವಾರಸಂತೆ, ಮಾ. 8: ಶನಿವಾರಸಂತೆಯಲ್ಲಿ ಎಲ್ಲಾ ಕಾಯಿಲೆಗಳಿಗೂ ನ್ಯೂಟ್ರಿಶಿಯನ್ ಪುಡಿ ಎಂದು ಸುಮಾರು 10 ಕಡೆಗಳಲ್ಲಿ ನ್ಯೂಟ್ರಿಶಿಯನ್ ಪುಡಿ ಸೆಂಟರ್ ಓಪನ್ ಮಾಡಿ ಹಣ ಮಾಡುವ ದಂಧೆಗಳು ಹುಟ್ಟಿಕೊಂಡಿವೆ. ಆದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.ನ್ಯೂಟ್ರಿಶಿಯನ್ ಪುಡಿ ಸೆಂಟರ್ ಓಪನ್ ಮಾಡಿ ಅಲ್ಲಿಗೆ ಬರುವ ಜನರಿಗೆ ಎಲ್ಲಾ ತರಹದ ಕಾಯಿಲೆ ಗುಣ ಆಗುತ್ತದೆ ಎಂದು ಹೇಳಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನು ಕುಡಿಯಬೇಕು ಎಂದು ತಿಳಿಸಿ ಒಬ್ಬರಿಗೆ ಪ್ರತಿ ದಿನ ಒಂದು ಗ್ಲಾಸ್ ನೀರಿಗೆ ಸ್ವಲ್ಪ ನ್ಯೂಟ್ರಿಶಿಯನ್ ಪುಡಿ ಹಾಕಿ ಕಲೆಸಿಕೊಡುತ್ತಾರೆ. ಈ ಒಂದು ಗ್ಲಾಸ್ಗೆ ರೂ. 100 ರಂತೆ ಎರಡು ತಿಂಗಳು ಬಿಡದೆ ಕುಡಿಯಬೇಕು ಎಂದು ಹೇಳುತ್ತಾರೆ. ಇವರ ಕಾರ್ಯಕ್ರಮದಿಂದ ತುಂಬಾ ಜನ ಮೋಸ ಹೋಗುತ್ತಿದ್ದಾರೆ. ಮೋಸ ಹೋಗುತ್ತಿರುವವರಲ್ಲಿ ಬಡವರು, ಶ್ರೀಮಂತರು ಎಲ್ಲಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರು ಸೇರಿರುತ್ತಾರೆ.ಈ ದಂಧೆಯ ಬಗ್ಗೆ ಈಗಾಗಲೇ ರಕ್ಷಣಾ ವೇದಿಕೆಯವರು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡಿರುತ್ತಾರೆ. ಆದರೆ, ದೂರು ನೀಡಿದವರ ಮೇಲೆ ಬೆದರಿಕೆ ಹಾಕಿರುವ ಪ್ರಸಂಗ ನಡೆದಿದ್ದು, ಈ ಬಗ್ಗೆ ಕೂಡ ದೂರು ದಾಖಲಾಗಿದೆ.
- ನರೇಶ್ ಚಂದ್ರ