ವೀರಾಜಪೇಟೆ, ಮಾ. 7: ಕಾನೂರು ಗ್ರಾಮದ ಮಲ್ಲಂಗೆರೆ ಎಂಬಲ್ಲಿ ಮರಾಠಿಗರ ಎ. ಅನುಜ ಎಂಬಾಕೆ ತನ್ನ ಕಾಫಿ ತೋಟದಲ್ಲಿ ಕಾಫಿ ಕುಯ್ಯುತ್ತಿದ್ದಾಗ ಅಲ್ಲಿಗೆ ಬಂದ ಅದೇ ಗ್ರಾಮದ ಚೆರಿಯಂಡ ರವೀಂದ್ರ ಅಲಿಯಾಸ್ ಸುಬ್ರಮಣಿ ಎಂಬಾತ ಆಕೆಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇರೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಜೀವಾವಧಿ ಶಿಕ್ಷೆ ಹಾಗೂ ರೂ: 30,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಕಳೆದ ತಾ:17-01-2014 ರಂದು ಬೆಳಿಗ್ಗೆ 11ಗಂಟೆಗೆ ಎಂ.ಟಿ. ಅಪ್ಪಯ್ಯ ಅವರ ಪತ್ನಿ ಅನುಜ (42) ತಮಗೆ ಸೇರಿದ ಕಾಫಿ ತೋಟದಲ್ಲಿ ಕಾಫಿ ಕುಯ್ಯುತ್ತಿದ್ದಾಗ ತೋಟಕ್ಕೆ ಅಕ್ರಮ ಪ್ರವೇಶ ಮಾಡಿದ ಚೆರಿಯಂಡ ರವೀಂದ್ರ ತಕರಾರು ಇರುವ ಕಾಫಿ ತೋಟದಲ್ಲಿ ಯಾಕೆ ಕಾಫಿ ಕುಯ್ಯುತ್ತಿದ್ದೀಯಾ ಎಂದು ಗದರಿಸಿ ಒಂಟಿ ನಳಿಕೆÉ ಕೋವಿಯಿಂದ ಗುಂಡು ಹಾರಿಸಿದ ಪರಿಣಾಮ ಗಂಭೀರ ಗಾಯಗೊಂಡ ಅನುಜಳನ್ನು ಆಸ್ಪತ್ರೆಗೆ ಸೇರಿಸಿದ ನಂತರ ಪೊನ್ನಂಪೇಟೆ ಪೊಲೀಸರು ರವೀಂದ್ರನ ವಿರುದ್ಧ ಗುಂಡು ಹಾರಿಸಿ ಕೊಲೆ ಯತ್ನ ಹಾಗೂ ಪ್ರಿವೆನ್ಷನ್ ಆಫ್ ಅಟ್ರಾಸಿಟಿ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಡಿ.ವೈ.ಎಸ್.ಪಿ. ಕುಮಾರ್‍ಚಂದ್ರ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಐ.ಪಿ.ಸಿ. ವಿಧಿ 307ರ ಪ್ರಕಾರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯಿದೆಯಡಿಯಲ್ಲಿ ಜೀವಾವಧಿ ಶಿಕ್ಷೆ, ರೂ. 30,000 ದಂಡ, ಶಸ್ತಾಸ್ತ್ರ ಕಾಯದೆಯಡಿಯಲ್ಲಿ 6 ತಿಂಗಳ ಸಜೆ, ರೂ. 2000 ದಂಡ ವಿಧಿಸಿದ್ದು ದಂಡದ ಹಣದಲ್ಲಿ ರೂ 20,000 ಹಣವನ್ನು ಗಾಯಾಳು ಅನುಜಳಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಡಿ.ನಾರಾಯಣ ಸರಕಾರದ ಪರವಾಗಿ ವಾದಿಸಿದರು.