ಮಡಿಕೇರಿ, ಮಾ. 7: ಕಳೆದ 15 ದಿನಗಳಿಂದ ಕೊಡಗು - ಕೇರಳ ಗಡಿಯ ಕಾನನದ ನಡುವೆ ನಕ್ಸಲೀಯ ಚಟುವಟಿಕೆ ವಿರುದ್ಧ ನಕ್ಸಲ್ ನಿಗ್ರಹ ಕಾರ್ಯಪಡೆ ಕಾರ್ಯಾಚರಣೆಯಲ್ಲಿ ತೊಡಗಿರುವ ಬೆನ್ನಲ್ಲೇ ನಿನ್ನೆ ರಾತ್ರಿ ದಕ್ಷಿಣ ಕೊಡಗಿನ ಕಾಡಂಚಿನಲ್ಲಿರುವ ವಯನಾಡು ಜಿಲ್ಲೆಯ ವೈತ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ನಕ್ಸಲನೊಬ್ಬ ಕಾರ್ಯಪಡೆಯ ಗುಂಡೇಟಿಗೆ ಬಲಿಯಾಗಿರುವ ಘಟನೆ ಸಂಭವಿಸಿದೆ.

ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ವಯನಾಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರ್ಪಸ್ವಾಮಿ ಈ ಅಂಶವನ್ನು ಖಚಿತಪಡಿಸಿದ್ದಾರೆ. ಕುಟ್ಟದಿಂದ ಸರಿ ಸುಮಾರು 36 ಕಿ.ಮೀ., ದೂರದ ವೈತ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಡಿ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಹತನಾದ ವ್ಯಕ್ತಿ ಅಲ್ಲಿನ ಮಲಪುರಂನ ಜಲೀಲ್ (41) ಎಂದು ದೃಢಪಟ್ಟಿದೆ.

ಈತನೊಂದಿಗೆ ನಕ್ಸಲ್ ಗುಂಪಿನ ವೇಲ್ ಮುರುಗನ್ ಹಾಗೂ ಇತರರಿದ್ದು, ಸುಮಾರು ಏಳೆಂಟು ಮಂದಿಯ ಈ ಗುಂಪು ಲಕ್ಕಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಸುಗಂಧ ಗಿರಿ, ಅಂಬಾಪರಿಸರದ ಕಾಡಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಖಾತರಿ ಪಡಿಸಿದ್ದು, ನಿನ್ನೆ ರಾತ್ರಿಯಿಂದ ಇಂದು ಹಗಲಿಡೀ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ವೈತ್ರಿ ಪೊಲೀಸ್ ಠಾಣಾ ಸರಹದ್ದಿನ ಲಕ್ಕಡಿ ಎಂಬಲ್ಲಿನ ಉಭವನ್ ರೆಸಾರ್ಟ್‍ನಲ್ಲಿ ತಂಗಿದ್ದ ಪ್ರವಾಸಿಗರಿಗೆ ಶಸ್ತ್ರಸಜ್ಜಿತ ಶಂಕಿತ ನಕ್ಸಲರು ಬೆದರಿಸಿ ರೂ. 50 ಸಾವಿರ ಮೊತ್ತದ ಹಣ ನೀಡುವಂತೆ ಬೇಡಿಕೆ ಸಲ್ಲಿಸಿದಾಗಿ ಗೊತ್ತಾಗಿದೆ. ವಿಷಯ ತಿಳಿದ ನಕ್ಸಲ್ ನಿಗ್ರಹ ಕಾರ್ಯಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆಗೆ ಧಾವಿಸಿದ್ದಾರೆ.

ಈ ವೇಳೆ ಪೊಲೀಸರತ್ತ ಗುಂಡು ಹಾರಿಸಿದ್ದು, ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದಾಗ ಜಲೀಲ್ ಹತನಾಗಿದ್ದು, ಇತರರು ಕಾಡಿನ ನಡುವೆ ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ. ಆ ಬೆನ್ನಲ್ಲೇ ನಕ್ಸಲ್ ನಿಗ್ರಹ ಕಾರ್ಯಪಡೆ ಈ ಪ್ರದೇಶವನ್ನು ಸುತ್ತುವರಿದು ವ್ಯಾಪಕ ಶೋಧ ಆರಂಭಿಸಿದ್ದಾಗಿ ಮಾಹಿತಿ ಲಭಿಸಿದೆ. ಅಲ್ಲದೆ ಕೊಡಗಿನ ನಾಗರಹೊಳೆ ಹಾಗೂ ಮಾಕುಟ್ಟ ಅಭಯಾರಣ್ಯದತ್ತ ನುಸುಳುವ ಶಂಕೆ ಬೆನ್ನಲ್ಲೇ ಕೊಡಗು ನಕ್ಸಲ್ ನಿಗ್ರಹ ಕಾರ್ಯಪಡೆ ಮತ್ತು ಕೊಡಗು ಪೊಲೀಸರು ವ್ಯಾಪಕ ಕಣ್ಗಾವಲು ಇರಿಸಿದ್ದಾರೆ.

ಎಸ್‍ಪಿ ಮಾಹಿತಿ: ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ರಾತ್ರಿ ವೈತ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲಯೊಬ್ಬ ಹತನಾಗಿ, ಇತರರು ತಲೆಮರೆಸಿಕೊಂಡು ಕಾಡಿನಲ್ಲಿ ನುಸುಳಿರುವ ಖಚಿತ ಸುಳಿವಿನ ಮೇರೆಗೆ ಗಡಿಯುದ್ದಕ್ಕೂ ಕಣ್ಗಾವಲು ಇರಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಚುನಾವಣೆಯ ಸಮಯದಲ್ಲಿ ಕೊಡಗಿನ ಸೂಕ್ಷ್ಮ ಪ್ರದೇಶಗಳಲ್ಲಿ ಭಯ ಸೃಷ್ಟಿಸುವ ಯತ್ನವನ್ನು ಹತ್ತಿಕ್ಕುವ ಪ್ರಯತ್ನದೊಂದಿಗೆ ಎಲ್ಲಾ ರೀತಿ ಮುಂಜಾಗ್ರತಾ ಕ್ರಮಕ್ಕಾಗಿ ಅಲ್ಲಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಖಚಿತ ಪಡಿಸಿದರು.