ವಾಯುಸೇನೆ ಪೈಲಟ್ ವಿರುದ್ಧ ಎಫ್‍ಐಆರ್
ಇಸ್ಲಾಮಾಬಾದ್, ಮಾ. 8: ಬಾಲಾಕೋಟ್‍ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ ಎಂದು ಭಾರತ ಪುರಾವೆ ನೀಡುತ್ತಿದ್ದರೂ ಪಾಕ್ ಮಾತ್ರ ಬಾಲಾಕೋಟ್‍ನಲ್ಲಿ ಬೆಟ್ಟದ ಮೇಲೆ ಬಾಂಬ್ ದಾಳಿ ಮಾಡಿ ಮರಗಳ ಮಾರಣಹೋಮ ಮಾಡಲಾಗಿದೆ ಎಂದು ಆರೋಪಿಸಿದೆ. ಈ ಮಧ್ಯೆ ಪಾಕಿಸ್ತಾನ ಬಾಲಾಕೋಟ್‍ನಲ್ಲಿ 19 ಮರಗಳ ಮಾರಣಹೋಮ ನಡೆಸಿದ್ದಾರೆ ಎಂದು ಅಜ್ಞಾನ ಭಾರತೀಯ ವಾಯುಸೇನೆ ಪೈಲಟ್ ವಿರುದ್ಧ ಎಫ್‍ಐಆರ್ ದಾಖಲಿಸಿದೆ. ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದಲ್ಲಿ ಉಗ್ರ ದಾಳಿ ಬಳಿಕ ಫೆಬ್ರವರಿ 26 ರಂದು ಭಾರತೀಯ ವಾಯುಸೇನೆ ಪಾಕಿಸ್ತಾನ ಬಾಲಾಕೋಟ್‍ನಲ್ಲಿ ಜೈಷ್‍ಇಮೊಹಮ್ಮದ್ ಉಗ್ರ ಕ್ಯಾಂಪ್‍ಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿ ನಂತರ ಜಾಗತಿಕವಾಗಿ ಪಾಕಿಸ್ತಾನದ ಮರ್ಯಾದೆ ಕುಂದಿತು. ಇದನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಭಾರತೀಯ ವಾಯುಸೇನೆ ಬೆಟ್ಟಗಳ ಮೇಲೆ ಬಾಂಬ್ ದಾಳಿ ನಡೆಸಿ ನಮ್ಮ ಅರಣ್ಯವನ್ನು ನಾಶ ಮಾಡಿದೆ ಎಂದು ಹೇಳಿಕೊಂಡು ಬಂದಿತ್ತು.
ಮಿಗ್-21 ಯುದ್ಧ ವಿಮಾನ ಪತನ
ಬಿಕಾನೇರ್, ಮಾ. 8: ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವೊಂದು ಇಂದು ರಾಜಸ್ಥಾನದ ಬಿಕಾನೇರ್ ಪ್ರದೇಶದ ಬಳಿ ಪತನವಾಗಿದ್ದು, ಪ್ಯಾರಾಚ್ಯೂಟ್ ಸಹಾಯದಿಂದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಕಾನೇರ್ ಪಟ್ಟಣದಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಶೋಭಾಸರ್ ಕಿ ಧನಿ ಎಂಬ ಪ್ರದೇಶದಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದೆ. ಮಿಗ್-21 ಟೇಕ್ ಆಫ್ ಆಗುವ ಸಂದರ್ಭದಲ್ಲಿ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಬಹುಶಃ ಇದರಿಂದಲೇ ವಿಮಾನದ ತಾಂತ್ರಿಕ ವ್ಯವಸ್ಥೆಯಲ್ಲಿ ಏರುಪೇರಾಗಿ ವಿಮಾನ ಪತನವಾಗಿದೆ ಎಂದು ಐಎಎಫ್ ಅಧಿಕಾರಿಗಳು ಶಂಕಿಸಿದ್ದಾರೆ. ಈ ವಿಮಾನವನ್ನು ರಾಜಸ್ತಾನದಲ್ಲಿರುವ ಐಎಎಫ್ನ ನಾಲ್ ವಿಮಾನ ನಿಲ್ದಾಣದಿಂದ ಗಸ್ತು ಕಾರ್ಯಾಚರಣೆಗೆಂದು ತೆಗೆದುಕೊಂಡು ಹೋಗಲಾಗಿತ್ತು. ವಿಮಾನ ಪತನಗೊಳ್ಳುವ ವಿಷಯ ಅರಿವಿಗೆ ಬರುತ್ತಿದಂತೆ ಮೊದಲು ಪೈಲಟ್ ಪ್ಯಾರಾಚ್ಯೂಟ್ ನೆರವಿನಿಂದ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆ. ಶೋಭಾಸರ್ ಕಿ ಧನಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಬಿಕಾನೇರ್‍ನ ಎಸ್ಪಿ ಪ್ರದೀಪ್ ಮೋಹನ್ ಶರ್ಮಾ ಅವರು ತಿಳಿಸಿದ್ದಾರೆ. ಈ ಬಗ್ಗೆ ಐಎಎಫ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಇಂದು ರಾಜಸ್ತಾನದ ಬಿಕಾನೇರ್ ಬಳಿ ಮಿಗ್-21 ಯುದ್ಧ ವಿಮಾನ ಗಸ್ತು ತಿರುಗುತ್ತಿತ್ತು. ವಿಮಾನ ಟೇಕ್ ಆಫ್ ಆಗುತ್ತಿದ್ದ ವೇಳೆ ಪಕ್ಷಿಯೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ತಾಂತ್ರಿಕ ದೋಷ ಉಂಟಾಗಿ ವಿಮಾನ ಪತನವಾಗಿರಬಹುದು. ಈ ಬಗ್ಗೆ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಬೈಜಯಂತ್ ಬಿಜೆಪಿ ನೂತನ ಉಪಾಧ್ಯಕ್ಷ
ನವದೆಹಲಿ, ಮಾ. 8: ಇತ್ತೀಚಿಗಷ್ಟೇ ಬಿಜೆಡಿ ತೊರೆದು ಕೇಸರಿಪಡೆ ಸೇರಿದ್ದ ಒಡಿಶಾದ ಮಾಜಿ ಸಂಸದ ಬೈಜಯಂತ್ ಜಯ್ ಪಾಂಡಾ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ. ತಮ್ಮನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಹಾಗೂ ವಕ್ತಾರರಾಗಿ ನೇಮಕ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಪಕ್ಷಕ್ಕಾಗಿ ನಾನು ಉತ್ತಮ ಕೆಲಸ ಮಾಡಲು ಎಲ್ಲಾ ಸಹೋದ್ಯೋಗಿಗಳು ನನಗೆ ಸಹಕಾರ ನೀಡಬೇಕು ಎಂದು ಪಾಂಡಾ ಅವರು ಟ್ವೀಟ್ ಮಾಡಿದ್ದಾರೆ. ಪಾಂಡಾ ಅವರು ಕಳೆದ ಮಾರ್ಚ್ 4 ರಂದು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು.
ಜನತಾ ದರ್ಶನದಲ್ಲಿ ನಕಲಿ ವೈದ್ಯಕೀಯ ದಾಖಲೆ
ಬೆಂಗಳೂರು, ಮಾ. 8: ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ನಕಲಿ ವೈದ್ಯಕೀಯ ದಾಖಲೆಗಳೊಂದಿಗೆ ನೆರವಿಗಾಗಿ ಅರ್ಜಿ ಸಲ್ಲಿಸಿದ್ದ ಇಬ್ಬರ ವಿರುದ್ಧ ವಿಧಾನಸೌಧ ಪೆÇಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಫೆಬ್ರವರಿ 20 ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾದರ್ಶನದಲ್ಲಿ ಚನ್ನಪ್ಪ ಹಾಗೂ ಸುನಂದಮ್ಮ ಎಂಬವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ಕಚೇರಿ ಸಿಬ್ಬಂದಿ ಪರಿಶೀಲಿಸಿದಾಗ ಅವರು ಲಗತ್ತಿಸಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳು ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಂದಿತ್ತು. ಈ ಹಿನ್ನೆಲೆ ದಾಖಲೆಗಳ ನೈಜತೆ ಪರಿಶೀಲಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಅಲ್ಲದೆ, ಶಾಖೆಯ ಇಬ್ಬರು ಸಿಬ್ಬಂದಿಯ ತಂಡ ರಚಿಸಿ, ವರದಿ ನೀಡುವಂತೆ ಕೂಡ ಸೂಚಿಸಲಾಗಿತ್ತು. ಅದರಂತೆ ಈ ಸಿಬ್ಬಂದಿ ಫೆಬ್ರವರಿ 26 ರಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ದಾಖಲೆಗಳು ನಕಲಿ ಎಂದು ದೃಢಪಟ್ಟಿತ್ತು.
ಮಹಿಳಾ ಶಕ್ತಿಯನ್ನು ಶ್ಲಾಘಿಸಿದ ಮೋದಿ
ವಾರಣಾಸಿ, ಮಾ. 8: ಮಹಿಳೆಯರ ಸಕಾರಾತ್ಮಕ ಕೊಡುಗೆ ಇಲ್ಲದೆ ಯಾವದೇ ವಲಯ ಈ ಜಗತ್ತಿನಲ್ಲಿಲ್ಲ. ಮಹಿಳಾ ಶಕ್ತಿಗೆ ಸಮಾಜ ಹಾಗೂ ದೇಶವನ್ನು ಪರಿವರ್ತಿಸುವ ಸಾಮಥ್ರ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನವಾದ ಇಂದು ವಾರಣಾಸಿಯ ಬಡಲಾಲ್ ಪುರ್ನ ಪಂಡಿತ್ ದೀನ್ ದಯಾಳ್ ಹಸ್ತಕಲಾ ಸಂಕುಲ್‍ನಲ್ಲಿ ಸಮಾವೇಶಗೊಂಡಿದ್ದ ಮಹಿಳೆಯರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಮಹಿಳೆಯರು ದೇಶದ ರಕ್ಷಣೆ, ಕೃಷಿ, ಆರೋಗ್ಯ, ಶಿಕ್ಷಣ ಮತ್ತಿತರ ವಲಯಗಳಲ್ಲಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ತಮ್ಮ ಕುಟುಂಬವನ್ನು ಜೋಪಾನ ಮಾಡಿಕೊಂಡು, ಸಮಾಜ ಹಾಗೂ ದೇಶದ ಸಮೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಿ ನುಡಿದರು. ಮಹಿಳೆಯರ ಜೀವನ ಮಟ್ಟ ಸುಧಾರಿಸುವ ಹಾಗೂ ಸಬಲೀಕರಣಗೊಳಿಸುವ ಬೇಟಿ “ಬಚಾವೋ ಬೇಟಿ ಪಡಾವೋ”, “ಆಯುಷ್ಮಾನ್ ಭಾರತ್”, “ಮಾತೃತ್ವ ಸುರಕ್ಷಾ ಯೋಜನಾ”, “ಮಾತೃತ್ವ ಅವಕಾಶ್”, “ಉಜ್ವಲಾ ಯೋಜನ” ಮತ್ತಿತರ ಹತ್ತು ಹಲವು ಯೋಜನೆಗಳನ್ನು ಕೇಂದ್ರದ ಎನ್‍ಡಿಎ ಸರ್ಕಾರ ಜಾರಿಗೊಳಿಸುತ್ತಿದೆ ಎಂದರು.
ಹಲ್ಲೆಕೋರರ ವಿರುದ್ಧ ಕ್ರಮ : ಪ್ರಧಾನಿ
ಲಖನೌ, ಮಾ. 8: ಪುಲ್ವಾಮಾ ಉಗ್ರ ದಾಳಿಯ ನಂತರ ದೇಶದ ವಿವಿಧೆಡೆ ನಡೆಯುತ್ತಿದ್ದ ಕಾಶ್ಮೀರಿಗಳ ಮೇಲಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದು, ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ. ಇಂದು ಕಾನ್ಪುರದಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇತ್ತೀಚಿಗೆ ಲಖನೌದಲ್ಲಿ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದವರು ವಿಚಿತ್ರ ಜನರು. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕ ಎಂದರು. ದೇಶದಲ್ಲಿ ಏಕತೆಯ ವಾತಾವರಣವನ್ನು ಕಾಪಾಡುವದು ಬಹಳ ಮುಖ್ಯ. ಹೀಗಾಗಿ ದೇಶದಲ್ಲಿ ಕಾಶ್ಮೀರಿಗಳ ಮೇಲೆ ಈ ರೀತಿಯ ಹಲ್ಲೆ, ಹಿಂಸೆ, ದಬ್ಟಾಳಿಕೆ ನಡೆದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಇತರ ರಾಜ್ಯಗಳಿಗೂ ಮನವಿ ಮಾಡುತ್ತೇನೆ ಎಂದರು. ಇದೇ ವೇಳೆ ಲಖನೌ ಪ್ರಕರಣದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಕ್ಷಣ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ಮೋದಿ ಪ್ರಶಂಸಿಸಿದರು.