ಚೆಟ್ಟಳ್ಳಿ, ಮಾ. 8: ಕಳೆದ ಮಹಾಮಳೆಗೆ ತುತ್ತಾಗಿ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದ ನಿರಾಶ್ರಿತರಿಗೆ ಇನ್ಫೋಸಿಸ್ ಫೌಂಡೇಶನ್ ಬೆಂಗಳೂರು ಮತ್ತು ಕೊಡಗು ಸೇವಾ ಕೇಂದ್ರ ಮಡಿಕೇರಿ ಅವರ ವತಿಯಿಂದ ನಾಲ್ಕನೇ ಸುತ್ತಿನಲ್ಲಿ ಎಂಬತ್ತು ಫಲಾನುಭವಿಗಳಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.

ಮಡಿಕೇರಿಯ ಕೊಡವ ಸಮಾಜ ಸಂಕೀರ್ಣದಲ್ಲಿರುವ ಕೊಡಗು ಸೇವಾ ಕೇಂದ್ರದ ಕಚೇರಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ , ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಇನ್ಫೋಸಿಸ್ ಸಂಸ್ಥೆಯ ರಾಘವೇಂದ್ರ ಉಡುಪ ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಈಗಾಗಲೇ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅವರ ಸ್ವಂತ ಜಾಗದಲ್ಲಿ ಮನೆ ಕಟ್ಟಲು ಹಣವು ಬಿಡುಗಡೆಯಾಗಲಿದೆ ಎಂದರು. ಏನಾದರು ಸಮಸ್ಯೆ ಇದ್ದಲ್ಲಿ ತಮ್ಮ ಕಚೇರಿಯಲ್ಲಿ ನೇರವಾಗಿ ಭೇಟಿಯಾಗಿ ಹೇಳಿಕೊಳ್ಳಬಹುದೆಂದರು. ಕೊಡಗು ಸೇವಾ ಕೇಂದ್ರವು ನಿರಾಶ್ರಿತರಿಗೆ ಮಾಡಿದ ಕೆಲಸದ ಬಗ್ಗೆ ಅವರು ಶ್ಲಾಘಿಸಿದರು.

ವೀಣಾ ಅಚ್ಚಯ್ಯ ಅವರು ಮಾತನಾಡಿ, ತಮಗೆ ನೀಡಿದ ಹೊಲಿಗೆ ಯಂತ್ರವನ್ನು ಸದ್ಬಳಕೆ ಮಾಡಿ ನಿತ್ಯದ ಜೀವನ ನಿರ್ವಹಣೆ ಖರ್ಚುವೆಚ್ಚಗಳನ್ನು ನಿಭಾಯಿಸಬಹುದೆಂದು ಮಹಿಳೆಯರಿಗೆ ಕಿವಿಮಾತನ್ನು ಹೇಳಿದರು.

ಕಾರ್ಯಕ್ರಮವನ್ನು ನಿರೂಪಿಸಿ ಮಾತನಾಡಿದ ಬಿದ್ದಾಟಂಡ ತಮ್ಮಯ್ಯ ಅವರು ಈಗಾಗಲೇ ಕೊಡಗು ಸೇವಾ ಕೇಂದ್ರದ ಮೂಲಕ ವಿವಿಧ ಸಂಘ ಸಂಸ್ಥೆ ಹಾಗೂ ದಾನಿಗಳ ಮೂಲಕ ನೀಡಿರುವ ಸಹಕಾರದ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಕೊಡಗು ಸೇವಾ ಕೇಂದ್ರದ ಪದಾಧಿಕಾರಿಗಳಾದ ತೇಲಪಂಡ ಪ್ರಮೋದ್, ಪಾಂಡೀರ ಮುತ್ತಣ್ಣ, ಅಜ್ಜೀನಂಡ ತಮ್ಮು ಪೂವಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ಮಂದಪಂಡ ಸತೀಶ್, ಮದನ್ ವಿ.ಟಿ. ರಿಷಿಕಾ ಚೆನ್ನಪಂಡ, ಕೊಡಗು ವಿದ್ಯಾ ಸಂಘದ ಗಣೇಶ್ ಉಪಸ್ಥಿತರಿದ್ದರು.