ಶನಿವಾರಸಂತೆ, ಮಾ. 6: ಲಯನ್ಸ್ ಕ್ಲಬ್ ಆಫ್ ಹೆಚ್.ಸಿ.ಎಸ್. ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜು ಶನಿವಾರಸಂತೆ ಇವರ ವತಿಯಿಂದ ರಾಷ್ಟ್ರೋತ್ಥಾನ ರಕ್ತನಿಧಿ ಬೆಂಗಳೂರು ಇವರ ಸಹಕಾರ ದೊಂದಿಗೆ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಸಾರ್ವಜನಿಕರು ಸೇರಿ 150 ಮಂದಿ ರಕ್ತದಾನ ಮಾಡಿದರು.
ರಾಷ್ಟ್ರೋತ್ಥಾನ ರಕ್ತನಿಧಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ, ವೈದ್ಯ ಡಾ. ಈಶ್ವರ್ ಅವರು ಮಾತನಾಡಿ, ರೋಗಿಗಳಿಗೆ ರಾಷ್ಟ್ರೋತ್ಥಾನ ರಕ್ತ ನಿಧಿಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿ ಜೀವನ-ಮರಣದಲ್ಲಿ ಹೋರಾಡುತ್ತಿರುವಾಗ ರಕ್ತದಾನ ಮಾಡಿದರೆ ನಮ್ಮ ಕಣ್ಣಮುಂದೆಯೇ ಒಂದು ಜೀವ ಉಳಿದ ತೃಪ್ತಿ ನಮಗಿರುತ್ತದೆ ಎಂದರು.
ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಲಯನ್ಸ್ ಎ.ಎಂ. ಆನಂದ್ ರಕ್ತದಾನ ಜೀವನದಲ್ಲಿ ಉತ್ತಮ ಕಾರ್ಯ ಎಂದರು. ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ರವಿಕಾಂತ್ ಎಸ್.ಎಸ್. ಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ತದಾನ ಶಿಬಿರದಲ್ಲಿ ರಾಷ್ಟ್ರೋತ್ಥಾನ ರಕ್ತನಿಧಿ ಬೆಂಗಳೂರಿನ ಡಾ. ಹನುಮೇಶ್, ನರ್ಸ್‍ಗಳಾದ ರವಿ, ಮೂರ್ತಿ, ಮಂಜು, ಟೆಕ್ನೀಶಿಯನ್ ಗಳಾದ ಶಿವು, ಸದಾಶಿವ, ಸಾರತಿ, ಮೋಹನ್, ಅಮರೀಶ್ ಸಹಕಾರ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಲಯನ್ಸ್ ಆನಂದ್, ಲಯನ್ಸ್ ಕ್ಲಬ್‍ನ ಉಪಾಧ್ಯಕ್ಷರುಗಳಾದ ಎನ್.ಬಿ. ನಾಗಮ್ಮ, ಬಿ.ಸಿ. ಧರ್ಮಪ್ಪ, ಕಾರ್ಯದರ್ಶಿ ಲಯನ್ಸ್ ಬಿ.ಕೆ. ಚಿಣ್ಣಪ್ಪ, ಸದಸ್ಯ ಲಯನ್ಸ್ ಕೆ.ಎಂ. ಜಗನ್‍ಪಾಲ್, ಭಾರತಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ದಯಾನಂದ, ಲಯನ್ಸ್ ಕ್ಲಬ್‍ನ ಸದಸ್ಯರು, ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನಿಶಾ ಪ್ರಾರ್ಥಿಸಿ, ಲಯನ್ಸ್ ಸದಸ್ಯ ಎಂ.ಆರ್. ಮಲ್ಲೇಶ್ ಧ್ವಜವಂದನೆ ಸಲ್ಲಿಸಿದರು. ಕಾರ್ಯದರ್ಶಿ ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಭಯೋತ್ಪಾದಕ ನಕ್ಸಲ್ ಚಟುವಟಿಕೆಯಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಮೌನಾಚರಣೆ ಸಲ್ಲಿಸಲಾಯಿತು. ವಿದ್ಯಾಸಂಸ್ಥೆಯ ಕನ್ನಡ ಉಪನ್ಯಾಸಕ ಹರೀಶ್ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.