ಮಡಿಕೇರಿ, ಮಾ. 6: ರಾಜ್ಯದ ರೈತರಿಗೆ ಮತ್ತು ಸಾರ್ವಜನಿಕರಿಗೆ ತಂತ್ರಜ್ಞಾನವನ್ನು ಬಳಸಿ ಕಾಲಮಿತಿಯೊಳಗೆ ಪರಿಪೂರ್ಣವಾದ ಭೂ ದಾಖಲೆಗಳನ್ನು ಒದಗಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಡ್ರೋನ್ ಆಧಾರಿತ ಸರ್ವೆ ಕಾರ್ಯದ ಒಡಂಬಡಿಕೆಗೆ ಸಹಿಯೊಂದಿಗೆ ಪ್ರಾಯೋಗಿಕವಾಗಿ ಇದಕ್ಕೆ ಚಾಲನೆ ನೀಡಲಾಗಿದೆ.
ಕರ್ನಾಟಕ ಸರಕಾರ ಮತ್ತು ಭಾರತೀಯ ಸರ್ವೇಕ್ಷಣಾ ಸಂಸ್ಥೆಯ ವತಿಯಿಂದ ನಡೆಸುವ ಈ ಕಾರ್ಯದ ಕುರಿತು ಇತ್ತೀಚೆಗೆ ರಾಜ್ಯದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದ ಕೆಲವೆಡೆ ಇದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದೆ. ಪ್ರಾರಂಭಿಕವಾಗಿ ರಾಜ್ಯದ ಐದು ಜಿಲ್ಲೆಗಳಾದ ತುಮಕೂರು, ಹಾಸನ, ಉತ್ತರ ಕನ್ನಡ, ಬೆಳಗಾವಿ, ರಾಮನಗರ ಮತ್ತು ಬೆಂಗಳೂರು ನಗರದಲ್ಲಿ ಸರ್ವೆ ಕಾರ್ಯ ಪ್ರಾರಂಭವಾಗಲಿದೆ. ಸುಮಾರು 2 ವರ್ಷಗಳಲ್ಲಿ ಉದ್ದೇಶಿತ ಕಾರ್ಯವನ್ನು ಪೂರ್ಣಗೊಳಿಸಬಹುದೆಂದು ಅಂದಾಜಿಸಲಾಗಿದೆ.
2019-20ನೇ ಸಾಲಿನಲ್ಲಿ ವಿಜಯಪುರ, ಕೊಡಗು, ಧಾರವಾಡ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಎರಡನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.