ಸೋಮವಾರಪೇಟೆ,ಮಾ.5: ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿನ ಚರ್ಚೆ ಸಂದರ್ಭ ಕೊಡವ-ಗೌಡ ವಿಚಾರದಲ್ಲಿ ಈರ್ವರು ಸದಸ್ಯರ ನಡುವೆ ಕೆಲಕಾಲ ಜಟಾಪಟಿ ನಡೆಯಿತು.ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದ ವಲಸಿಗರಿಗೆ ನಿರಾಶ್ರಿತರ ಸವಲತ್ತು ಲಭಿಸಿದೆ. ಆದರೆ ಇಲ್ಲಿನ ಮಂದಿಗೆ ಸಿಕ್ಕಿಲ್ಲ. ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿ ಬಂದಿರುವ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದರೆ ಹುಟ್ಟುವ ಮಗುವಿಗೆ ಯಾವ ದೇಶದ ಪೌರತ್ವ ನೀಡುತ್ತೀರಿ? ಎಂದು ಬಿಜೆಪಿ ಪ್ರತಿನಿಧಿಸುವ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್ ಅವರನ್ನು ಪ್ರಶ್ನಿಸಿದರು.

ಈ ಸಂದರ್ಭ ಎದ್ದುನಿಂತ ಕಾಂಗ್ರೆಸ್ ಸದಸ್ಯ ಬಿ.ಬಿ. ಸತೀಶ್ ಅವರು, ‘ಬಾಂಗ್ಲಾದೇಶದವರು ಅನ್ನಬೇಡಿ; ನುಸುಳುಕೋರರು ಅನ್ನಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಣಿ ಉತ್ತಪ್ಪ, ನಾನು ಅಧಿಕಾರಿಯನ್ನು ಪ್ರಶ್ನಿಸುತ್ತಿದ್ದೇನೆ. ಅವರು ಉತ್ತರಿಸಲಿ; ಬಾಂಗ್ಲಾದವರು ಅಂದ್ರೆ ನಿಮಗೇಕೆ ನೋವಾಗುತ್ತೆ? ಎಂದು ಪ್ರಶ್ನಿಸಿದರು. ಈ ಸಂದರ್ಭ ಎದ್ದುನಿಂತ ಸತೀಶ್, ತನ್ನ ಜಾತಿ ವಿವರಣೆ ನೀಡಿ ಮೇಜು ಕುಟ್ಟಿದರು. ಹೌದು ನಾವುಗಳು ಜಾತಿ - ಜಾತಿ ಅಂತ ಕಿತ್ತಾಡ್ತಾ ಇದ್ದೀವಿ. ಮುಂದೆ ಬಾಂಗ್ಲಾ ವಲಸಿಗರಿಂದ ದುರಂತ ಸಂಭವಿಸಿದಾಗ ಗೊತ್ತಾಗುತ್ತೆ. ಈಗಾಗಲೇ ಯಾವ ಎಸ್ಟೇಟ್‍ಗಳಲ್ಲಿ ಯಾರಿದ್ದಾರೆ ಎಂದು ಪತ್ತೆಹಚ್ಚುವದೇ ಅಸಾಧ್ಯವಾಗಿದೆ. ಈಗಾಗಲೇ ಕಾನೂನು ಸುವ್ಯವಸ್ಥೆಗೆ ಸಮಸ್ಯೆಂ iÀiÁಗುತ್ತಿದೆ. ಇಂತಹ ನುಸುಳು ಕೋರರಿಗೆ ಭೂಮಿ ದಾನ ಮಾಡಲು ಹಲವಷ್ಟು ಮಂದಿ ಮುಂದೆ ಬಂದಿದ್ದಾರೆ. ಪ್ರವಾಹ ಸಂದರ್ಭ ಮೂಲನಿವಾಸಿ ಸಂತ್ರಸ್ತರಿಗಿಂತ ಹೆಚ್ಚು ಸೌಲಭ್ಯಗಳು ನುಸುಳುಕೋರರಿಗೆ ಲಭಿಸಿದೆ. ಇದು ಗಂಭೀರವಾದ ವಿಚಾರ ಎಂದು ಮಣಿ ಉತ್ತಪ್ಪ ಹೇಳಿದರು.

ಇದಕ್ಕೆ ಮತ್ತೋರ್ವ ಸದಸ್ಯ ಕುಶಾಲಪ್ಪ ದನಿಗೂಡಿಸಿ, ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸೋಮವಾರಪೇಟೆ ಭಾಗದಲ್ಲಿ ಇಂತಹ ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಮಣಿ ಉತ್ತಪ್ಪ ಅವರ ಆಗ್ರಹ ಸಮರ್ಪಕವಾಗಿದೆ ಎಂದರು.

ಈ ಬಗ್ಗೆ ಕೆಲ ನಿಮಿಷಗಳ ಕಾಲ ಚರ್ಚೆ ನಡೆಯಿತು. ಸಮರ್ಪಕ ದಾಖಲೆಗಳಿಲ್ಲದ ಎಷ್ಟು ಕಾರ್ಮಿಕರು ತಾಲೂಕಿನಲ್ಲಿ ನೆಲೆಸಿದ್ದಾರೆ? ಎಂದು ಕಾರ್ಮಿಕ ಇಲಾಖಾ ಅಧಿಕಾರಿಯನ್ನು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಯಿಂದ ಯಾವದೇ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಸದಸ್ಯ ಸತೀಶ್, ಈ ಹಿಂದೆಯೂ ಅಕ್ರಮ ವಲಸಿಗರ ವಿರುದ್ಧ ಪ್ರತಿಭಟನೆ ನಡೆಸಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದರು. ಬಾಂಗ್ಲಾ ವಲಸಿಗರ ವಿಚಾರದಲ್ಲಿ ಸದಸ್ಯರಿಂದ ಜಟಾಪಟಿ!

(ಮೊದಲ ಪುಟದಿಂದ) ತಾಲೂಕು ಪಂಚಾಯಿತಿಯಿಂದ ಪ್ರತಿ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಕಾರ್ಮಿಕ ಇಲಾಖೆಯವರು ಈ ಬಗ್ಗೆ ಸರ್ವೆ ನಡೆಸಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಬೇಕು. ಪೊಲೀಸ್ ಇಲಾಖೆಯ ಸಹಕಾರದಿಂದ ಅವರನ್ನು ಹೊರಕಳುಹಿಸುವ ಕೆಲಸ ಆಗಬೇಕು ಎಂದು ಅಭಿಮನ್ಯುಕುಮಾರ್ ಹೇಳಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು ಸಭೆ ನಡೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರು ಸಭೆಯ ಗಮನಕ್ಕೆ ತಂದರು. ಸಂತ್ರಸ್ತರಿಗೆ ವಿತರಿಸಲಾಗುತ್ತಿರುವ ಮನೆಗಳು ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಸಿಗದಂತೆ ಎಚ್ಚರಿಕೆ ವಹಿಸಬೇಕು. ಮೂಲನಿವಾಸಿಗಳಾದ, ನಿಜವಾದ ಸಂತ್ರಸ್ತರಿಗೆ ಸವಲತ್ತು ಸಿಗುವಂತೆ ಜಾಗ್ರತೆ ವಹಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

- ವಿಜಯ್ ಹಾನಗಲ್