ಮಡಿಕೇರಿ, ಮಾ. 3: ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಯೋರ್ವ ಮೇಲಧಿಕಾರಿಗಳಿಗೆ ಮೋಸಗೊಳಿಸಿದ್ದಲ್ಲದೆ, ವ್ಯಕ್ತಿಯೊಬ್ಬರಿಗೆ ಬೋಗಸ್ ಕೋವಿ ಪರವಾನಗಿ ವಿತರಿಸಿರುವ ಗುರುತರ ಆರೋಪ ಮೇರೆಗೆ ಕರ್ತವ್ಯದಿಂದ ವಜಾಗೊಂಡಿದ್ದಾರೆ. ಈತನ ವಿರುದ್ಧ ಸ್ವತಃ ಹೆಚ್ಚುವರಿ ಜಿಲ್ಲಾಧಿಕಾರಿಗಳೇ ನಗರ ಪೊಲೀಸ್ ಠಾಣೆಗೆ ದೂರು ನೀಡುವದರೊಂದಿಗೆ ಮೊಕದ್ದಮೆ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಶ್ರೀನಿಧಿ ಕರ್ತವ್ಯದಿಂದ ಅಮಾನತುಗೊಂಡು, ಪೊಲೀಸ್ ಮೊಕದ್ದಮೆ ದಾಖಲಾಗಿರುವ ಬೆನ್ನಲ್ಲೇ ತಲೆಮರೆಸಿಕೊಂಡಿರುವದಾಗಿ ಗೊತ್ತಾಗಿದೆ. ಈತನ ವಿರುದ್ಧ ಮೊಕದ್ದಮೆ ಸಂಖ್ಯೆ 06/2019 ಪೊಲೀಸ್ ಕಾಯ್ದೆ 465, 466ರ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಿಲ್ಲಾ ಪ್ರಬಾರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್ ಅವರು ನಗರ ಠಾಣೆಯಲ್ಲಿ ದೂರು ನೀಡಿದ್ದಾಗಿದೆ. ಆ ಪ್ರಕಾರ ಸುಂಟಿಕೊಪ್ಪ ನಿವಾಸಿ ಎ.ಎ. ಮನು ಎಂಬವರು ತಮ್ಮ ತಂದೆ ದಿ. ಅಚ್ಚಮ್ಮಯ್ಯ ಎಂಬವರ ಹೆಸರಿನಲ್ಲಿದ್ದ ಕೋವಿಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾಗಿ ತಿಳಿದು ಬಂದಿದೆ. ಆ ಪ್ರಕಾರ ಜಿಲ್ಲಾಧಿಕಾರಿ ಕಚೇರಿಯಿಂದ ತನ್ನ ಹೆಸರಿಗೆ ವರ್ಗಾವಣೆ ಪತ್ರ ಹೊಂದಿಕೊಳ್ಳಲಾಗಿದೆ.
ಅಲ್ಲದೆ ಈ ವೇಳೆ ತನ್ನ ಕೋವಿ ಸಂಖ್ಯೆ 138376 ಎಂದಿದ್ದು, ಹೆಸರಿನ ವರ್ಗಾವಣೆ ಸಂದರ್ಭ 138676 ಎಂದು ತಪ್ಪಾಗಿ ನಮೂದಿಸಲ್ಪಟ್ಟಿರುವದ್ದನ್ನು ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಲಿಖಿತ ಕೋರಿಕೆ ಸಲ್ಲಿಸಿದ್ದಾರೆ. ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಂಶಯಗೊಂಡು ಕಚೇರಿಯ ಕಡತ ಸಂಖ್ಯೆ ಎ.ಆರ್.ಎಂ. 832 : 2016-17ರಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ತಾ. 12.6.2017 ರಂದು ಅಂದಿನ ಜಿಲ್ಲಾಧಿಕಾರಿ ಷರಾ ಬರೆದು ಕಚೇರಿ ಟಿಪ್ಪಣಿಯಂತೆ ಸಂಬಂಧಿಸಿದ ವರ್ಗಾವಣೆ ಕೋರಿಕೆ ಅರ್ಜಿ ತಿರಸ್ಕøತಗೊಂಡಿರುವದು ಬೆಳಕಿಗೆ ಬಂದಿದೆ. ಅಲ್ಲದೆ ಮೇಲಿನ ಪ್ರಕರಣ ತಡೆಹಿಡಿಯುವಂತೆ ಆದೇಶ ನೀಡಿರುವದು ಕಂಡು ಬಂದಿದೆ.
ಅಲ್ಲದೆ ಅರ್ಜಿದಾರರು ಕೋವಿ ಸಂಖ್ಯೆ ಬದಲಾವಣೆಗೊಂಡಿದ್ದಾಗಿ ಉಲ್ಲೇಖಿಸಿರುವ ಪ್ರಕರಣ ಮತ್ತು ಕಡತದಲ್ಲಿ ತಿರಸ್ಕøತಗೊಂಡಿರುವ ಕಡತದ ಸಂಖ್ಯೆ ಎರಡು ಒಂದೇ ಆಗಿರುವದು ಗೋಚರಿಸಿದೆ. ಮಾತ್ರವಲ್ಲದೆ ಸಿಬ್ಬಂದಿ ಶ್ರೀನಿಧಿ ಆಮಿಷಕ್ಕೆ ಒಳಗಾಗಿ ಬೋಗಸ್ ಪರವಾನಗಿ ವಿತರಿಸಿರುವದು ದೃಢಪಟ್ಟಿದೆ. ಇದರೊಂದಿಗೆ ಕಳೆದ ಸುಮಾರು 11 ತಿಂಗಳಿನಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಸ್ತ್ರಾಸ್ತ್ರ ಹೊಂದಲು ಮತ್ತು ಕೋವಿಗಳ ಪರವಾನಗಿ ಸಂಬಂಧ ಸಾರ್ವಜನಿಕರಿಗೆ ಮೋಸಗೊಳಿಸಿರುವ ಸಂಶಯ ಹುಟ್ಟಿಕೊಂಡಿದೆ.
ಇಂತಹ ಗುರುತರ ಆರೋಪಗಳ ನಡುವೆ ಆತನನ್ನು ಜಿಲ್ಲಾಧಿಕಾರಿ ಕಚೇರಿಯಿಂದ ತಾಲೂಕು ತಹಶೀಲ್ದಾರ್ ಕಚೇರಿಗೆ ವರ್ಗಾವಣೆಗೊಳಿಸಿದ್ದು, ಅಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲಿಗೆ ಕರ್ತವ್ಯಕ್ಕೂ ತೆರಳದಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ತಾ. 1.1.2018 ರಿಂದ 30.11.2018ರ ಅವದಿಯ ತನಕ ಸಮಗ್ರ ತನಿಖೆಯೊಂದಿಗೆ ಇಡೀ ಪ್ರಕರಣವನ್ನು ಬಯಲಿಗೆಳೆಯುವಂತೆ ನಿರ್ದೇಶಿಸಿದ್ದಾರೆ. ಆದರೆ ಆರೋಪಿಯು ತಲೆಮರೆಸಿಕೊಂಡಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.