ಸೋಮವಾರಪೇಟೆ, ಮಾ. 3: ಜೇಸೀ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ದೇಶದೆಲ್ಲೆಡೆ ಪ್ರಯಾಸ್ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯವಾಗಿ “ರನ್ ಫಾರ್ ನೈನ್” ಹೆಸರಿನಲ್ಲಿ ಮಹಿಳೆಯರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ಗುರುಪ್ರಸಾದ್ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 8ರಂದು ಮಹಿಳಾ ದಿನಾಚರಣೆ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಪುಷ್ಪಗಿರಿ ಜೇಸಿಐ ಸಂಸ್ಥೆಯ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಪ್ರಯುಕ್ತ ಶಾಲಾ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕ ಮಹಿಳೆಯರೊಂದಿಗೆ ಜೇಸಿ ವೇದಿಕೆಯಿಂದ ತಾ. 8ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ತೆರಳಿ, ಚೆನ್ನಬಸಪ್ಪ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ಮಹತ್ವ ಹಾಗೂ ಅದರ ಬಳಕೆಯ ಬಗ್ಗೆ ಮಾಹಿತಿ ನೀಡಲಾಗುವದು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ಜೇಸೀ ಸಂಸ್ಥೆಯ ಕಾರ್ಯಕ್ರಮದಲ್ಲಿ ಕೈ ಜೋಡಿಸಲಿವೆ ಎಂದರು. ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್, ಪದಾಧಿಕಾರಿಗಳಾದ ಸುಮಲತಾ ಪುರುಷೋತ್ತಮ್, ಮಾಯಾ ಗಿರೀಶ್, ಕೆ.ಎ. ಪ್ರಕಾಶ್ ಉಪಸ್ಥಿತರಿದ್ದರು.