ಸಿದ್ದಾಪುರ, ಮಾ. 1: ಇತ್ತೀಚೆಗೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸಿದ್ದಾಪುರದ ಎಮ್ಮೆಗುಂಡಿ ತೋಟದ ವಿದ್ಯಾರ್ಥಿನಿ ಕುಟುಂಬಕ್ಕೆ ಸರಕಾರದಿಂದ ಆರ್ಥಿಕ ನೆರವು ಹಾಗೂ ನಿವೇಶನ ನೀಡುವದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.
ಕುಶಾಲನಗರದ ಬಸವನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿಯನ್ನು ಭೇಟಿಯಾದ ಜಸ್ಟಿಸ್ ಫಾರ್ ಸಂಧ್ಯಾ ಹೋರಾಟ ಸಮಿತಿಯ ಪ್ರಮುಖರು, ವಿದ್ಯಾರ್ಥಿನಿಯ ಕುಟುಂಬದ ಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಸ್ವಂತ ನಿವೇಶನವಿಲ್ಲದೆ ಕಾಫಿ ತೋಟದ ಲೈನ್ ಮನೆಯಲ್ಲಿ ಆಕೆಯ ಕುಟುಂಬ ಜೀವನ ಸಾಗಿಸುತ್ತಿದ್ದು, ಅವರಿಗೆ ನಿವೇಶನ ಹಾಗೂ ಸೂರು ಒದಗಿಸಬೇಕೆಂದು ಸಮಿತಿಯ ಪ್ರಮುಖರು ಮುಖ್ಯಮಂತ್ರಿಗಳ ಗಮನ ಸೆಳೆದರು. ಈ ಸಂದರ್ಭ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸಂಧ್ಯಾಳ ಕುಟುಂಬಕ್ಕೆ ಮಡಿಕೇರಿಯಲ್ಲಿ ಮನೆ ಒದಗಿಸಿಕೊಡಲಾಗುವದೆಂದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಸರಕಾರದಿಂದ ದೊರೆಯುವ ಆರ್ಥಿಕ ನೆರವನ್ನು ಕೂಡಲೇ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭ ಪೋಷಕರಿಗೆ ಮುಖ್ಯಮಂತ್ರಿಗಳು ಸಾಂತ್ವನ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಶಾಸಕ ಹೆಚ್. ವಿಶ್ವನಾಥ್, ಜಿಲ್ಲಾಧಿಕಾರಿ ಅನೀಶ್ ಕಣ್ಮನಿ ಜಾಯ್, ಜಿಲ್ಲಾ ವರಿಷ್ಠಾಧಿಕಾರಿ ಡಾ. ಸುಮನ್ ಪಣ್ಣೇಕರ್ ಸೇರಿದಂತೆ ಇನ್ನಿತರರು ಇದ್ದರು.
ಮುಖ್ಯಮಂತ್ರಿಗಳ ಭೇಟಿ ಸಂದರ್ಭ ಹೋರಾಟ ಸಮಿತಿ ಸಂಚಾಲಕ ಶಿವಪ್ಪ, ಸದಸ್ಯರಾದ ವಿಶ್ವನಾಥ್, ರೆಜಿತ್ ಕುಮಾರ್ ಗುಹ್ಯ, ಎ.ಎಸ್ ಮುಸ್ತಫ, ಚಂದ್ರಶೇಖರ್, ರಮೇಶ್, ಸುರೇಶ್, ಗ್ರಾ.ಪಂ ಸದಸ್ಯ ಜಾಫರ್ ಆಲಿ, ಮೃತಳ ಪೋಷಕರು ಇದ್ದರು.