ಸಿದ್ದಾಪುರ, ಮಾ. 2 : ಕಳೆದ ಕೆಲವು ತಿಂಗಳುಗಳಿಂದ ನಾಪತ್ತೆಯಾದ ಕಾಡಾನೆಗಳು ಇದೀಗ ಮತ್ತೊಮ್ಮೆ ಕಾಫಿ ತೋಟಗಳಲ್ಲಿ ಪ್ರತ್ಯಕ್ಷಗೊಂಡಿವೆ. ಕಳೆದ ಒಂದು ವಾರಗಳಿಂದ ಸಿದ್ದಾಪುರದ ಗುಹ್ಯ ಹಾಗೂ ಕರಡಿಗೋಡು ಗ್ರಾಮಗಳ ಕಾಫಿ ತೋಟಗಳಲ್ಲಿ ಆನೆಗಳು ಕಂಡು ಬಂದಿದ್ದು ಆತಂಕ ಸೃಷ್ಟಿಯಾಗಿದೆ. ಅರಣ್ಯ ಪ್ರದೇಶದೊಳಗೆ ಕಾಡಾನೆಗಳಿಗೆ ಬೇಕಾದ ಆಹಾರ ಇಲ್ಲದ ಹಿನೆÀ್ನಲೆಯಲ್ಲಿ ಆಹಾರ ಹಾಗೂ ನೀರನ್ನು ಅರಸಿಕೊಂಡು ನಾಡಿಗೆ ಬರುತ್ತಿವೆ. ಕೆಲವು ಕಾಡಾನೆಗಳು ತೋಟದೊಳಗೆ ಮರಿ ಹಾಕಿದ್ದು, ಅರಣ್ಯ ಕಾಡಾನೆಗಳ ಮರಿಗಳು ತೋಟದಲ್ಲೇ ವಾಸ್ತವ್ಯ ಹೂಡುತ್ತಿವೆ. ಕಳೆದ ಕೆಲವು ತಿಂಗಳ ಹಿಂದೆ ಮಾಲ್ದಾರೆಯ ಸಮೀಪದಲ್ಲಿ 20ಕ್ಕೂ ಅಧಿಕ ಕಾಡಾನೆಗಳ ಹಿಂಡು ಸಾರ್ವಜನಿಕ ರಸ್ತೆಯಲ್ಲೇ ಅಡ್ಡಲಾಗಿ ಸಂಚರಿಸಿದ್ದವು. ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿರುವ ಹಿನೆÀ್ನಲೆಯಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜೀವನವನ್ನು ಕೈಯಲ್ಲೇ ಹಿಡಿದುಕೊಂಡು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆಯು ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಕೂಡ ಸಮಸ್ಯೆಗಳು ಬಗೆಹರಿದಿಲ್ಲ. ಕೂಡಲೇ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಸರಕಾರ ಹಾಗೂ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

- ವಾಸು