ಮಡಿಕೇರಿ, ಫೆ. 28: ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಆರಂಭಿಸಿರುವ “ಮಹಿಳಾ ಅಧಿಕಾರ ಯಾತ್ರೆ”ಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಚಾಲನೆ ನೀಡಲಾಯಿತು.
ಜಿಲ್ಲಾ ಮಹಿಳಾ ಕಾಂಗ್ರೆಸ್ ತಂಡದ ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಮಹಿಳೆಯರಿಗೆ ಸಂವಿಧಾನದಲ್ಲಿ ಸಮಾನ ಹಕ್ಕನ್ನು ನೀಡಿಲಾಗಿದ್ದು, ಅದರಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಗುರುತಿಸಿ ಕೊಂಡಿದ್ದಾರೆ. ಅಲ್ಲದೆ ಮಹಿಳೆಯರಿಗೆ ಮೀಸಲಾತಿಯನ್ನು ನೀಡಲಾಗುತ್ತಿದೆ. ಇದೇ ಪ್ರಕಾರ ವಾಗಿ ರಾಜಕೀಯ ಕ್ಷೇತ್ರದಲ್ಲೂ ಸಮಾನತೆ ಯಾಕಿರ ಬಾರದು ಎಂದು ಪ್ರಶ್ನಿಸಿದರು. ಮಹಿಳೆ ಯರನ್ನು ಕಡೆಗಣಿಸದೆ ಈ ಲೋಕ ಸಭಾ ಚುನಾವಣೆಯಲ್ಲಿ ಶೇ.33 ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೈಲಾ, ತಾಹಿರಾ ಹಫೀಜ್, ನಗರಾಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ನಗರಸಭಾ ಸದಸ್ಯೆ ಜುಲೇಕಾಬಿ, ಇಂದಿರಾ ಮಹಿಳಾ ಶಕ್ತಿ ಘಟಕದ ಅಧ್ಯಕ್ಷೆ ಶಶಿ, ಸೇವಾದಳದ ಪ್ರೇಮ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಹಾಗೂ ಪ್ರಮುಖರಾದ ಮುಮ್ತಾಜ್, ಉದಯ ಚಂದ್ರಿಕಾ, ಮಿನಾಜ್ ಪ್ರವೀಣ್ ಈ ಸಂದರ್ಭ ಹಾಜರಿದ್ದರು.
ಮಂಗಳೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಮಹಿಳಾ ಅಧಿಕಾರ ಯಾತ್ರೆ ಕಾರ್ಯಕ್ರಮದಲ್ಲಿ ಕೊಡಗಿನ ಮಹಿಳಾ ಕಾಂಗ್ರೆಸ್ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಸುರಯ್ಯ ಅಬ್ರಾರ್ ಅವರನ್ನು ಯಾತ್ರೆ ತೆರಳುವ ಸಂದರ್ಭ ಸುಳ್ಯ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿದರು.