ವೀರಾಜಪೇಟೆ, ಫೆ. 28: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮೊಗರಗಲ್ಲಿಯ ಹರಿಕೇರಿಯಿಂದ ನೆಹರೂ ನಗರಕ್ಕೆ ತೆರಳುವ ಹಾದಿಯಲ್ಲಿ ಭಾರೀ ತಡೆಗೋಡೆಯೊಂದು ಬಿರುಕುಬಿಟ್ಟು ಅಪಾಯದ ಅಂಚಿನಲ್ಲಿದ್ದು ಇದರ ಕೆಳಗಿರುವ ಅನೇಕ ಮನೆಗಳ ಕುಟುಂಬಗಳು ಭಯಭೀತರಾಗಿ ಜೀವನ ಸಾಗಿಸುತ್ತಿರುವದರಿಂದ ಇದನ್ನು ಆದ್ಯತೆ ಮೇರೆ ದುರಸ್ತಿ ಇಲ್ಲವೇ ಹೊಸ ತಡೆಗೋಡೆ ಕಟ್ಟಲು ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ನೆಹರೂ ನಗರದ 7ನೇ ಬ್ಲಾಕ್‍ನಲ್ಲಿ ತಡೆಗೋಡೆ ಬಿರುಕುಗೊಂಡು ನಿವಾಸಿಗಳು ಭಯ ಭೀತರಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಮನೆಯಪಂಡ ಕೆ. ದೇಚಮ್ಮ ಜಿಲ್ಲಾಧಿಕಾರಿಯ ಗಮನಕ್ಕೆ ತಂದಾಗ ತಡೆಗೋಡೆಯನ್ನು ಖುದ್ದು ವೀಕ್ಷಿಸಿದ ಅವರು ಈ ತಡೆಗೋಡೆಗೆ ಭಾರೀ ವೆಚ್ಚ ತಗಲಲಿದೆಯಾದರೂ ಇಲ್ಲಿನ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಹೊಸ ತಡೆಗೋಡೆ ನಿರ್ಮಾಣದ ಕುರಿತು ಕ್ರಮ ಕೈಗೊಳ್ಳಲಾಗುವದು. ಮುಂದಿನ ಮುಂಗಾರು ಮಳೆಗೆ ಮೊದಲೇ ಕಾಮಗಾರಿ ಪೂರ್ಣ ಗೊಳಿಸಲೇಬೇಕು ಎಂದು ಅಲ್ಲಿನ ನಿವಾಸಿಗಳಿಗೆ ಭರವಸೆ ನೀಡಿದರು. ಜಿಲ್ಲಾಧಿಕಾರಿಯ ವೀಕ್ಷಣೆ ಸಂದರ್ಭ ತಾಲೂಕು ತಹಶೀಲ್ದಾರ್ ಬಿ.ಎಂ. ಗೋವಿಂದ ರಾಜು, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸಹಾಯಕ ಅಭಿಯಂತರ ಎಂ.ಕೆ. ಸುರೇಶ್, ಪಟ್ಟಣ ಪಂಚಾಯಿತಿ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಸಿಬ್ಬಂದಿಗಳು ಹಾಜರಿದ್ದರು.