*ಸಿದ್ದಾಪುರ, ಫೆ. 28: ಕಾಡಿನೊಂದಿಗೆ ಅವಿನಾಭಾವ ಸಂಬಂಧವಿರಿಸಿಕೊಂಡು ವನ ದೇವತೆಯನ್ನು ಪೂಜಿಸುತ್ತಾ ಅರಣ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವೀರಾಜಪೇಟೆ ತಾಲೂಕು ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಆದಿವಾಸಿಗಳ ಬದುಕು ಮೂರಾಬಟ್ಟೆಯಾಗಿದೆ. ತಲ ತಲಾಂತರದಿಂದ ತಿತಿಮತಿ ಮೀಸಲು ಅರಣ್ಯ ವಲಯದ ವ್ಯಾಪ್ತಿಯ ದೇವಮಚ್ಚಿ ಚೆನ್ನಂಗಿ ಮುಂತಾದೆಡೆ ಬದುಕಿನ ಬಂಡಿ ಸಾಗಿಸುತ್ತಿದ್ದ ಜನ ಮುಂದೇನು ಎಂದು ತಲೆಯ ಮೇಲೆ ಕೈಹೊತ್ತು ಆಕಾಶ ನೋಡುವಂತಾಗಿದೆ.

ಹಲವು ವರ್ಷಗಳ ಹಿಂದೆ ಇಲ್ಲಿನ ಆದಿವಾಸಿಗಳು ಸಾವಿರಾರು ಎಕ್ರೆಯಷ್ಟು ಭತ್ತದ ಗದ್ದೆಯನ್ನು ರೂಡಿಸಿಕೊಂಡು ಅಲ್ಪ ಸ್ವಲ್ಪ ಜಮೀನಿನಲ್ಲಿ ಕಾಫಿಗಿಡಗಳನ್ನು ನೆಟ್ಟು ಪೋಷಿಸಿ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು ಆದರೆ ಇತ್ತೀಚಿಗಿನ ಕಾಡಾನೆ ಹಾವಳಿ ವಿಪರೀತವಾದ್ದರಿಂದ ಉತ್ತು ಭಿತ್ತಿ ಬೆಳಸಿದ ಭತ್ತ ಕಾಡಾನೆ ಪಾಲಾಗುತ್ತಿರುವದರಿಂದ ಗದ್ದೆ ಕೃಷಿಯನ್ನು ಕೈ ಬಿಟ್ಟಿದ್ದಾರೆ.

ಜನರ ಸತತ ಹೋರಾಟದಿಂದ ಕಾಡಾನೆ ಹಾವಳಿ ತಡೆಗಟ್ಟಲು ಕೇಂದ್ರ ಸರಕಾರದಿಂದ ರೈಲ್ವೆ ಕಂಬ ಬಂದಿದೆ. ಇದರಿಂದ ಬೆಳೆಗಾರರಿಗೆ ಅನುಕೂಲಕರವಾಗಿದೆ. ಆದರೆ ಕಾಮಗಾರಿ ಟೆಂಡರ್ ಶೀಘ್ರದಲ್ಲೇ ಕರೆದು ಆರಂಭಿಸುವ ಕಾರ್ಯ ಆಗಬೇಕು ಎಂದು ಕಾಫಿ ಬೆಳೆಗಾರ ವಾಟೇರ ಸುರೇಶ್ ತಿಳಿಸಿದ್ದಾರೆ.

ಚನ್ನಯ್ಯಕೋಟೆ ಗ್ರಾ.ಪಂ. ಸದಸ್ಯ ಮೆಕೇರಿರ ಅರುಣ್ ಪ್ರತಿಕ್ರಿಯಿಸಿ ಹಲವಾರು ಬಾರಿ ಹೋರಾಟ ನಡೆಸಿ ಶಾಸಕರಿಗೆ ಸಂಸದರರಿಂದ ಕೇಂದ್ರ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ ಮೇರೆಗೆ ರೈಲ್ವೆ ಕಂಬ ಬೇಲಿ ಪರಿಕರಗಳು ಅರಣ್ಯ ಇಲಾಖೆಗೆ ಬಂದಿದೆ.

ಕಾಮಗಾರಿ ಆದಷ್ಟು ಬೇಗ ಮಾಡಿದರೆ ಬೆಳೆಗಾರರ ಆತಂಕ ನಿವಾರಣೆಯಾಗಲಿದೆ ಎಂದು ಹೇಳಿದ್ದಾರೆ.