ಗೋಣಿಕೊಪ್ಪ ವರದಿ, ಫೆ. 28: ಇಲ್ಲಿನ ಕಾವೇರಿ ಕಾಲೇಜು ಎನ್ಎಸ್ಎಸ್ ಘಟಕ ಹಾಗೂ ರೆಡ್ಕ್ರಾಸ್ ಘಟಕದ ವತಿಯಿಂದ ಏಡ್ಸ್ ಜಾಗೃತಿ ಮತ್ತು ರಕ್ತದಾನ ಶಿಬಿರ ನಡೆಯಿತು.
49 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 55 ಜನರು ರಕ್ತದಾನ ಮಾಡಿದರು. ಗಿಡಕ್ಕೆ ನೀರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ರವಿ ಕರುಂಬಯ್ಯ, 18 ವರ್ಷ ಮೇಲ್ಪಟ್ಟ ಆರೋಗ್ಯವಂತ ಯುವ ಜನರು ರಕ್ತದಾನ ಮಾಡುವದರಿಂದ ಅಪಘಾತದಲ್ಲಿ ತೀರ್ವ ರಕ್ತಸ್ರಾವಕ್ಕೆ ಒಳಗಾಗಿ ಜೀವನ್ಮರಣ ಸ್ಥಿತಿಯಲ್ಲಿರು ವವರನ್ನು ಬದುಕಿಸಿಕೊಳ್ಳಬಹುದು. ರಕ್ತದಾನ ಮಾಡುವದರಿಂದ ಆರೋಗ್ಯದಿಂದಿರಬಹುದು. ಆರೋಗ್ಯವಂತ ವ್ಯಕ್ತಿ ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕಿ ಕೂಪದೀರ ಸುನಿತಾ ಮುತ್ತಣ್ಣ ಮಾತನಾಡಿ, ಇತ್ತೀಚಿನ ಸರ್ವೆ ಪ್ರಕಾರ ಹದಿ ಹರೆಯದ ಯುವಕರು ಹೆಚ್ಚಾಗಿ ಏಡ್ಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಕಾರಣ ಏಡ್ಸ್ ಬಗ್ಗೆ ಯುವ ಜನರಲ್ಲಿ ಜಾಗೃತಿಯ ಕೊರತೆ ಇದೆ. ಹೆಚ್ಐವಿ ರೋಗಾಣು ಹರಡುವದನ್ನು ನಿಯಂತ್ರಿಸಲು ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದ ದೂರವಿರಬೇಕು ಎಂದರು. ಈ ಸಂದರ್ಭ ಪ್ರಾಂಶುಪಾಲ ಎಸ್.ಆರ್. ಉಷಾಲತ, ಎನ್ಎಸ್ಎಸ್ ಅಧಿಕಾರಿಗಳಾದ ಎಂ.ಎನ್. ವನಿತ್ಕುಮಾರ್, ಎನ್.ಪಿ. ರೀತ ಇದ್ದರು.