ಸೋಮವಾರಪೇಟೆ, ಫೆ. 28: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇಲ್ಲಿನ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿಪತ್ತು ನಿರ್ವಹಣಾ ಪರಿಚಯಾತ್ಮಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ಪ್ರಕೃತಿ ವಿನಾಶದಿಂದಾಗುವ ದುಷ್ಪರಿಣಾಮ, ಭೂ ಸವೆತ, ಮಾನವ-ಪ್ರಾಣಿ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಅರಣ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಅರಣ್ಯಕ್ಕೆ ಬೆಂಕಿ ಬೀಳದ ಹಾಗೆ ಮುಂಜಾಗ್ರತೆ ವಹಿಸಬೇಕು. ಕಾಡಿಗೆ ಬೆಂಕಿ ಬಿದ್ದಲ್ಲಿ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳ ಗಮನಕ್ಕೆ ತಂದು ಬೆಂಕಿ ಆರಿಸಲು ಮುಂದಾಗಬೇಕು. ಇದರಿಂದಾಗಿ ಅರಣ್ಯದಲ್ಲಿ ಬೆಲೆ ಬಾಳುವ ಅರಣ್ಯ ಸಂಪತ್ತು ಹಾಗೂ ವನ್ಯ ಪ್ರಾಣಿಗಳ ರಕ್ಷಣೆ ಸಾಧ್ಯ ಎಂದರು.

ವೈದ್ಯಾಧಿಕಾರಿ ಸುಕೃತ ಮಾತನಾಡಿ, ಆರೋಗ್ಯ, ನೈರ್ಮಲ್ಯ ಹಾಗೂ ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ತಾವು ವಾಸಿಸುವ ಮನೆ ಮತ್ತು ಅದರ ಸುತ್ತಲಿನಲ್ಲಿ ತ್ಯಾಜ್ಯ ನೀರು ಸಂಗ್ರಹವಾಗದ ಹಾಗೆ ನೋಡಿಕೊಳ್ಳಬೇಕು. ಇದರಿಂದ ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದೆಂದರು.

ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳ ಹಕ್ಕುಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಠಾಣೆಯ ಹೆಚ್.ಎ. ಲವ ಮತ್ತು ಲಕ್ಷ್ಮೀಕುಮಾರ್ ಬೆಂಕಿ ಅವಘಡ ಮತ್ತು ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜೋಸೆಫರ ಪ್ರೌಢಶಾಲೆಯ ಪ್ರಬಾರ ಮುಖ್ಯ ಶಿಕ್ಷಕ ಸರ್ದಾರ್ ಬಾಷಾ ವಹಿಸಿದ್ದರು. ಈ ಸಂದರ್ಭ ಅಶೋಕ್, ಸಿಆರ್‍ಪಿ ಕಾಜೂರು ಸತೀಶ್ ಉಪಸ್ಥಿತರಿದ್ದರು.