ಮಡಿಕೇರಿ, ಫೆ. 27: ಕೊಡಗಿನಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸದಂತೆ ಹೊರಡಿಸಿರುವ ಆದೇಶವನ್ನು ಯಾವದೇ ಕಾರಣಕ್ಕೂ ಹಿಂಪಡೆಯಬಾರದೆಂದು ಕೊಡಗು ವನ್ಯ ಜೀವಿ ಸಂರಕ್ಷಣಾ ಸಂಘ ಒತ್ತಾಯಿಸಿದೆ.

ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಕೆ.ಸಿ. ಬಿದ್ದಪ್ಪ ಅವರು ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಜಲ ದುರಂತಕ್ಕೆ ಮಳೆಯೊಂದಿಗೆ ಮಾನವ ನಿರ್ಮಿತ ಕಾರ್ಯಗಳು ಕಾರಣ ಎಂದು ಆರೋಪಿಸಿದ್ದಾರೆ.

ಬೆಟ್ಟ ಗುಡ್ಡಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ರೆಸಾರ್ಟ್‍ಗಳ ನಿರ್ಮಾಣದಿಂದ ಮಳೆ ನೀರು ಹರಿಯಲು ತೊಂದರೆ ಉಂಟಾಗಿದೆ. ಮರಗಳ ನಾಶ ಹಾಗೂ ಯಂತ್ರಗಳನ್ನು ಬಳಸಿ ಗುಡ್ಡಗಳನ್ನು ಸಮತಟ್ಟು ಮಾಡಿರುವದು ದುರಂತಕ್ಕೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಕೊಡಗಿನ ಭವಿಷ್ಯದ ಹಿತದೃಷ್ಟಿಯನ್ನಿಟ್ಟುಕೊಂಡು ಯಾವದೇ ಒತ್ತಡವಿದ್ದರೂ ಕೃಷಿ ಭೂಮಿಯನ್ನು ಪರಿವರ್ತಿಸಲು ಅವಕಾಶವನ್ನು ಕೊಡಬಾರದೆಂದು ಒತ್ತಾಯಿಸಿದ್ದಾರೆ. ಆದರೆ ಮನೆ, ಬಂಗಲೆ ಅಥವಾ ಗ್ಯಾರೇಜ್‍ಗಳನ್ನು ನಿರ್ಮಿಸಲು 5-10 ಸೆಂಟ್ ಜಾಗ ಪರಿವರ್ತನೆಗೆ ಅವಕಾಶ ನೀಡಬೇಕೆಂದು ಕೋರಿದ್ದಾರೆ.