ಮಡಿಕೇರಿ, ಫೆ. 27: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಗೌಡರ ಯುವಾ ಸೇವಾ ಸಂಘ ಸುಳ್ಯ ಇವರ ಸಹಯೋಗದಲ್ಲಿ ಮಾರ್ಚ್ 2 ರಂದು ಸುಳ್ಯದ ಕೊಡಿಯಾಲಬೈಲಿನ ಸಮುದಾಯ ಭವನದಲ್ಲಿ ಪ್ರಥಮ ಅರೆಭಾಷೆ ಸಾಹಿತ್ಯ ಸಮೇಳನ ಏರ್ಪಡಿಸಲಾಗಿದೆ.ಸಾಹಿತಿ ಕೆ.ಆರ್. ಗಂಗಾಧರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಮ್ಮೇಳನದ ಅಂಗವಾಗಿ ನಡೆಯಲಿರುವ ಮೆರವಣಿಗೆಯ ಉದ್ಘಾಟನೆಯನ್ನು ಡಾ. ರೇಣುಕಾಪ್ರಸಾದ್ ಕೆ.ವಿ. ನೆರವೇರಿಸಲಿದ್ದಾರೆ. ಸಮ್ಮೇಳನದ ಧ್ವಜಾರೋಹಣವನ್ನು ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ನೆರವೇರಿಸಲಿದ್ದಾರೆ. ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಹಾಗೂ ಪುಸ್ತಕ ಪ್ರದರ್ಶನದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ನಡೆಸಲಿದ್ದಾರೆ.

ಸಮ್ಮೇಳನವನ್ನು ಕೇಂದ್ರ ಸರಕಾರದ ರಾಸಾಯನಿಕ ಗೊಬ್ಬರ ಮತ್ತು ಅಂಕಿ ಅಂಶಗಳ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನಡೆಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ವಿಶ್ರಾಂತ ಉಪಕುಲಪತಿಗಳಾದ ಡಾ. ಕೊಳಂಬೆ ಚಿದಾನಂದ ಗೌಡ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕ ಎಸ್. ಅಂಗಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಗೌರವ ಉಪಸ್ಥಿತರಾಗಿ ಕರ್ನಾಟಕ ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಎನ್.ಎಸ್. ದೇವಿಪ್ರಸಾದ್ ಮತ್ತು ಕೊಲ್ಯದ ಗಿರೀಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ ಭಾಗವಹಿಸಲಿದ್ದಾರೆ.

ಕಾವ್ಯಗಾನ ಕುಂಚ ಕಾರ್ಯಕ್ರಮ, ಅರೆಭಾಷೆ ಸಾಹಿತ್ಯ ವಿಚಾರಗೋಷ್ಠಿ, ಅರೆಭಾಷೆ ಸಬಲೀಕರಣ - ಭಾಷೆಗೆ ಮಾನ್ಯತೆ ಬಗ್ಗೆ ಗೋಷ್ಠಿ ನಡೆಯಲಿದೆ. ವಿಚಾರ ಗೋಷ್ಠಿಯಲ್ಲಿ ಕೆ.ಆರ್.ವಿದ್ಯಾಧರ್ ಬಡ್ಡಡ್ಕ ಮತ್ತು ಡಾ. ಕರುಣಾಕರ್ ನಿಡಿಂಜಿ ಭಾಗವಹಿಸುವರು. ಅರೆಭಾಷೆ ಪಳ್ಮೆ, ಹಾಸ್ಯ ಲಾಸ್ಯ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3.30 ಕ್ಕೆ ಸಮಾರೋಪ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಪೆÇ್ರ. ಕೆ.ಇ. ಸಾಹಿತಿ ರಾಧಾಕೃಷ್ಣ ನೆರವೇರಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನವನ್ನು ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಷನ್‍ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಭಾಗವಹಿಸಲಿದ್ದಾರೆ. ಅಭಿನಂದನಾ ಭಾಷಣವನ್ನು ಪರಪ್ಪುಮನೆ ಚಂದ್ರಶೇಖರ ಪೇರಾಲ್ ನೆರವೇರಿಸಲಿದ್ದು, ಮುಕ್ತಾಯದ ಮಾತನ್ನು ಸಮ್ಮೇಳನಾಧ್ಯಕ್ಷ ಕೆ.ಆರ್. ಗಂಗಾಧರ್ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕರಾದ ಪಡ್ಡಂಬೈಲು ವೆಂಕಟ್ರಮಣ ಗೌಡ, ಸಹಕಾರಿ ಸೇವೆಯಲ್ಲಿ ಜಾಕೆ ಮಾಧವ, ಆಡಳಿತ ಸೇವೆಯಲ್ಲಿ ಗೋಪಾಲಕೃಷ್ಣ ಕಣ್ಕಲ್, ಕೃಷಿಯಲ್ಲಿ ಗಂಗಯ್ಯ ಪೂಂಬಾಡಿ, ಕ್ರೀಡೆಯಲ್ಲಿ ಬಾಲಕೃಷ್ಣ ಗೌಡ ಕುದ್ವ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊಫೆಸರ್ ದಂಬೆಕೋಡಿ ಸುಶೀಲ ಸುಬ್ರಮಣಿ, ಪತ್ರಿಕೋದ್ಯಮದಲ್ಲಿ ಡಾ. ಯು.ಪಿ.ಶಿವಾನಂದ, ಉದ್ಯಮ ಕ್ಷೇತ್ರದಲ್ಲಿ ರಾಜೇಶ್ ತೇನನ, ಶಿಕ್ಷಣ ಸೇವೆಯಲ್ಲಿ ಗಣೇಶ್ ನಾಯರ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಧನಂಜಯ ಅಮೆಚೂರ್ ಅವರುಗಳನ್ನು ಸನ್ಮಾನಿಸಲಾಗುವದು. ಇದೇ ಸಂದರ್ಭದಲ್ಲಿ ವಿವಿಧ ಸಾಹಿತಿಗಳು ಬರೆದ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, ನಂತರ ಅರೆಭಾಷೆ ಸಾಂಸ್ಕೃತಿಕ ವೈಭವದಲ್ಲಿ ಕಲಾಬಳಗ ಮಡಿಕೇರಿ ಅರ್ಪಿಸುವ ಕುಡೆಕಲ್ ಸಂತೋಷ್ ನಿರ್ದೇಶನದ ‘‘ರೂಪಕ ವೀರ ಚರಿತ್ರೆ’’ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಯಶಸ್ವಿಗೆ ವಿವಿಧ ಸಂಘಟನಾ ಸಮಿತಿಗಳನ್ನು ರಚಿಸಿದ್ದು, ಸಮ್ಮೇಳನದಲ್ಲಿ ಗೌಡ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋಗಳೊಂದಿಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ 3000 ಮಂದಿ ಅಕಾಡೆಮಿಯ ಸದಸ್ಯರುಗಳಾದ ಕುಂಭಗೌಡನ ಪ್ರಸನ್ನ, ಬಾರಿಯಂಡ ಜೋಯಪ್ಪ, ಬೇಕಲ್ ದೇವರಾಜ, ಕಾನೆಹಿತ್ಲು ಮೊಣ್ಣಪ್ಪ, ಕಡ್ಲೇರ ತುಳಸಿ ಮೋಹನ್ ಭಾಗವಹಿಸಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ಹಾಗೂ ರಿಜಿಸ್ಟ್ರಾರ್ ಚಂದ್ರಹಾಸ ರೈ ತಿಳಿಸಿದ್ದಾರೆ.