ಮಡಿಕೇರಿ, ಫೆ. 27: 2018ರ ಸಾಲಿನ ಮಡಿಕೇರಿ ಐತಿಹಾಸಿಕ ದಸರಾ ಉತ್ಸವ ಮುಗಿದು 5 ತಿಂಗಳು ಕಳೆದರೂ ಸರಕಾರದ ಅನುದಾನ ಇನ್ನೂ ಬಿಡುಗಡೆಯಾಗದೆ ಉಳಿದುಕೊಂಡಿದ್ದು, ಈ ಬಗ್ಗೆ ದಸರಾ ಸಮಿತಿಯವರ ಕೂಗಿಗೆ ಯಾರೂ ಓಗೊಡದೆ ಪ್ರಕ್ರಿಯೆ ಇನ್ನೂ ನೆನೆಗುದಿಗೆ ಬಿದ್ದಿದೆ.! ದಸರಾಕ್ಕೆ ಮೊದಲು ಮಡಿಕೇರಿ ದಸರಾ ಸಮಿತಿಯವರು ಜಿಲ್ಲೆಯ ಶಾಸಕರುಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರನ್ನು ಭೇಟಿ ಮಾಡಿ ದಸರಾ ಉತ್ಸವಕ್ಕೆ ಅಂದಾಜು ರೂ. 1.50 ಕೋಟಿ ರೂ. ವೆಚ್ಚವಾಗುತ್ತಿದೆ, ಆದ್ದರಿಂದ ಸರಕಾರದಿಂದ ರೂ. 1.50 ಕೋಟಿ ಅನುದಾನವನ್ನು ಮಂಜೂರು ಮಾಡುವಂತೆ ಬೇಡಿಕೆ ಸಲ್ಲಿಸಿದ್ದರು.ಆದರೆ, ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಜಲಸ್ಫೋಟ ದಿಂದ ಸಾವು - ನೋವುಂಟಾಗಿರುವ ಹಿನ್ನೆಲೆಯಲ್ಲಿ ಅದ್ಧೂರಿ ಹಾಗೂ ಸಂಭ್ರಮವಿಲ್ಲದಂತೆ ಧಾರ್ಮಿಕ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ವಿಧಿವಿಧಾನಗಳಂತೆ ದಸರಾ ಉತ್ಸವವನ್ನು ಆಚರಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದರು. ದಸರಾ ಉತ್ಸವಕ್ಕೆ ಮೆರುಗು ನೀಡುವ ದಶ ಮಂಟಪಗಳ ಸಮಿತಿಯವರು ಸಭೆ ಸೇರಿ ವಿಜೃಂಭಣೆಯಿಲ್ಲದೆ, ಅದ್ಧೂರಿಯಿಲ್ಲದೆ, ಶ್ರದ್ಧಾ ಭಕ್ತಿಯಿಂದ ದಸರಾ ಉತ್ಸವವನ್ನು ಆಚರಿಸುವಂತೆ ತೀರ್ಮಾನ ತೆಗೆದುಕೊಂಡರು.

ಮನವಿ ಮಾಡಿಕೊಂಡ ಮೇರೆಗೆ ಮಡಿಕೇರಿ ದಸರಾ ಉತ್ಸವಕ್ಕೆ ರೂ. 50 ಲಕ್ಷ ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ 25 ಲಕ್ಷ ರೂ.ಗಳನ್ನು ಮಂಜೂರಾತಿ ಮಾಡುವದಾಗಿ ಜಿಲ್ಲಾ ಉಸ್ತುವಾರಿ

(ಮೊದಲ ಪುಟದಿಂದ) ಸಚಿವ ಹಾಗೂ ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್ ಘೋಷಿಸಿದರು. ಆರಂಭದಲ್ಲಿ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಸಮಿತಿಯವರು ಲಘುಬಗೆಯಿಂದ ಬೆಂಗಳೂರಿಗೆ ತೆರಳಿ ಅನುದಾನದ ಬಿಡುಗಡೆಗೆ ಆಸಕ್ತಿ ತೋರಿದರು. ಆದರೆ, ಸರಕಾರದಿಂದ ಅನುದಾನ ಬರಲಿಲ್ಲ, ದಸರಾ ಉತ್ಸವ ಕಳೆದು 5 ತಿಂಗಳು ಕಳೆದರೂ ಸರಕಾರದಿಂದ ಮಂಜೂರಾದ ಅನುದಾನವನ್ನು ತರಲು ಯಾರೂ ಗಂಭೀರವಾಗಿ ಮುಂದಾಗಲಿಲ್ಲ. ಕೆಲವರ ಪ್ರಯತ್ನಕ್ಕೆ ಚಿಕ್ಕಾಸೂ ಬೆಲೆ ಸಿಕ್ಕುತ್ತಿಲ್ಲ.

ಬಲ್ಲಮೂಲಗಳ ಪ್ರಕಾರ ಮಡಿಕೇರಿ ನಗರ ದಸರಾ ಸಮಿತಿಯವರು ಅಗತ್ಯ ದಾಖಲೆ ಪತ್ರಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ನಿಗದಿತ ಸಮಯದಲ್ಲಿ ಒದಗಿಸದ ಕಾರಣ ಸರಕಾರದ ಅನುದಾನ ಬಿಡುಗಡೆಗೊಳ್ಳಲಿಲ್ಲ. ಜೊತೆಗೆ ಪ್ರವಾಸೋದ್ಯಮ ಸಚಿವರು ಭರವಸೆ ನೀಡಿದ್ದರಿಂದ ದಸರಾ ಸಂಬಂಧಿತ ಪತ್ರವನ್ನು ಕನ್ನಡ ಸಂಸ್ಕøತಿ ಇಲಾಖೆ ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಿದೆ.

2018 ರ ಸಾಲಿನ ದಸರಾ ಉತ್ಸವದ ಬಾಪ್ತು ಹಣವನ್ನು ದಶ ಮಂಟಪದವರು, ಕಾರ್ಯಕ್ರಮ ನೀಡಿದವರು, ಕರಗ ಮಂಟಪದವರು ಮತ್ತು ಶಾಮಿಯಾನ ಹಾಕಿದವರು, ದೀಪಾಲಂಕಾರ ಮಾಡಿದವರು ಹೀಗೆ ಯಾರಿಗೂ ಪಾವತಿ ಮಾಡಲಾಗಿಲ್ಲ.

2019ರ ದಸರಾ ಜನೋತ್ಸವ ಇನ್ನೇನು ಚಾಲನೆ ದೊರೆಯಲು ಏಳು ತಿಂಗಳುಗಳಿರುವದು ಇಲ್ಲಿ ಗಮನಾರ್ಹ. 2018ರ ಸಾಲಿನ ದಸರಾ ಉತ್ಸವದ ಸಂಬಂಧಪಟ್ಟ ಲೆಕ್ಕಪತ್ರ ಆಗದ 2019 ರ ಸಾಲಿಗೆ ಮತ್ತೆ ದಸರಾ ಸಮಿತಿಯವರು ಮುಖ್ಯಮಂತ್ರಿಯವರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ತೆರಳಿ ಮನವಿ ಮಾಡಿದರೆ ಮಡಿಕೇರಿ ದಸರಾ ಉತ್ಸವಕ್ಕೆ ಅನುದಾನವನ್ನು ನೀಡಲು ಸರಕಾರಕ್ಕೆ ಶಿಫಾರಸ್ಸು ಮಾಡಿಯಾರೇ ಎಂಬದು ಪ್ರಶ್ನೆಯಾಗಿದೆ.!?

-ಶ್ರೀವತ್ಸ