ಗೋಣಿಕೊಪ್ಪಲು, ಫೆ. 26: ಇಲ್ಲಿನ ಕಾವೇರಿ ಕಾಲೇಜು ಆಂಗ್ಲಭಾಷಾ ವಿಭಾಗದ ವತಿಯಿಂದ ಆಂಗ್ಲಭಾಷೆ, ಸಾಹಿತ್ಯದ ಬೋಧನೆ ಮತ್ತು ಕಲಿಕೆಯಲ್ಲಿ ಹೊಸ ಆವಿಷ್ಕಾರದ ವಿಧಾನಗಳು, ತಂತ್ರಗಳು ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಲ್ಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಗೌರಮ್ಮ ನಂಜಪ್ಪ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಆಂಗ್ಲಭಾಷೆಯನ್ನು ಕಲಿಯ ಬೇಕಾದರೆ ಶಬ್ದ ಬಳಕೆ, ಬರವಣಿಗೆ ಹಾಗೂ ಮಾತನಾಡುವ ಕೌಶಲ್ಯ ಮುಖ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿದ್ಯಾನಿಲಯ ಮೈಸೂರು ಇಲ್ಲಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಎನ್. ಬಾಲಾಜಿ ಮಾತನಾಡಿ, ಪ್ರಪಂಚದ ಶೇ. 98 ರಷ್ಟು ಸಂಶೋಧನೆಗಳು ಆಂಗ್ಲಭಾಷೆಯ ಮೂಲಕ ನಡೆಯುತ್ತವೆ. ಶೇ. 70 ರಷ್ಟು ಟಿವಿ ಹಾಗೂ ರೇಡಿಯೋ ಕಾರ್ಯಕ್ರಮಗಳೂ ಕೂಡ ಆಂಗ್ಲಭಾಷೆಯಲ್ಲಿ ನಡೆಯುತ್ತವೆ.

ತರಗತಿಗಳಲ್ಲಿ ಭಾಷೆಯ ಬಗ್ಗೆ ಹೊಸ ಆವಿಷ್ಕಾರ ನಡೆಯಬೇಕು. ಪರೀಕ್ಷೆಗಳಲ್ಲಿ ಕೇವಲ ಬಾಯಿಪಾಠ ಮಾಡಿ ಬರೆಯುವಂತಹದಾಗದೆ. ಸೃಜನ ಶೀಲತೆ ಹೆಚ್ಚಿಸಲು ಪೂರಕವಾದಂತಹ ಪ್ರಶ್ನೆಗಳನ್ನು ಕೇಳುವ ಮೂಲಕ ಬುದ್ದಿಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೊ. ಬಿ.ಆರ್. ವಿಜಯ, ಡಾ. ನಳಿನಿ ಚಂದರ್ ವಿಷಯ ಮಂಡನೆ ಮಾಡಿದರು. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಡಾ. ಎ.ಎಸ್. ಪೂವಮ್ಮ, ಐಕ್ಯೂಎಸಿ ಸಂಚಾಲಕಿ ಎಂ.ಎಸ್. ಭಾರತಿ ಇದ್ದರು. ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಡಾ. ಪೊನ್ನಮ್ಮ ಮಾಚಯ್ಯ ವಹಿಸಿದ್ದರು. ಪೊನ್ನಂಪೇಟೆ ಕೊಡವ ಎಜುಕೇಷನ್ ಸೊಸೈಟಿ ಆಧ್ಯಕ್ಷ ಸಿ.ಪಿ. ಬೆಳ್ಯಪ್ಪ ಸಮಾರೋಪ ಭಾಷಣ ಮಾಡಿದರು. ಉಪನ್ಯಾಸಕ ಕೃಷಿಕ್ ಸ್ವಾಗತಿಸಿದರು. ಚಿತ್ರಾವತಿ ವಂದಿಸಿದರು.