ವೀರಾಜಪೇಟೆ, ಫೆ. 26: ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೊಡಗಿನ ಪೊನ್ನಂಪೇಟೆ, ಕುಶಾಲನಗರ ಪ್ರತ್ಯೇಕ ತಾಲೂಕುಗಳ ರಚನೆಗೆ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮತಿಸಿದ್ದು, ತಾ.28ರಂದು ಕೊಡಗಿಗೆ ಆಗಮಿಸುತ್ತಿರುವದರಿಂದ ಅವರನ್ನು ಭವ್ಯವಾಗಿ ಸ್ವಾಗತಿಸುವದರೊಂದಿಗೆ ಕೊಡಗಿನ ಜನತೆಯ ಪರವಾಗಿ ಅಭಿನಂದಿಸಲಾಗುವದು ಎಂದು ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದರು.
ವೀರಾಜಪೇಟೆ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಜೆ.ಡಿಎಸ್. ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಗಣೇಶ್ ಅವರು ಗುರುವಾರ ಕುಮಾರಸ್ವಾಮಿ ಅವರು ಕುಶಾಲನಗರ ಬಳಿಯ ಬಸವನಳ್ಳಿಗೆ ಬರಲಿದ್ದು ಅವರನ್ನು ಕೊಡಗಿನ ಗಡಿಭಾಗ ಕೊಪ್ಪಗೇಟ್‍ನಲ್ಲಿ ಸ್ವಾಗತಿಸಲಾಗುವದು ಎಂದರು. ಪಕ್ಷದ ಮುಖಂಡ ಎಂ.ಟಿ.ಕಾರ್ಯಪ್ಪ ಮಾತನಾಡಿ ಪೊನ್ನಂಪೇಟೆ ತಾಲೂಕು ರಚನೆ ಹಾಗೂ ವೀರಾಜಪೇಟೆಗೆ ನಾಲ್ಕೂವರೆ ಕೋಟಿ ವೆಚ್ಚದ ಹೈಟೆಕ್ ಜೈಲ್‍ಗೆ ಸಮ್ಮಿಶ್ರ ಸರಕಾರ ಕಾರಣವಾಗಿದ್ದು ಕುಮಾರಸ್ವಾಮಿಯವರ ನೇತೃತ್ವದಲ್ಲಿ ಮುಂದೆ ಕೊಡಗು ಸರ್ವತೋಮುಖದ ಅಭಿವೃದ್ಧಿಯನ್ನು ಕಾಣಲಿದೆ ಎಂದು ಹೇಳಿದರು.
ವೀರಾಜಪೇಟೆ ಅಧ್ಯಕ್ಷ ಎಸ್.ಎಚ್.ಮತೀನ್ ಮಾತನಾಡಿ ಕೊಡಗಿನ ರೈತರ ಪರ ಕಾಳಜಿ ಹೊಂದಿರುವ ಕುಮಾರಸ್ವಾಮಿ ರೈತರ ಸಾಲ ಮನ್ನಾದೊಂದಿಗೆ ಜನತೆಯ ಬೇಡಿಕೆಯಂತೆ ಎರಡು ತಾಲೂಕುಗಳ ರಚನೆಗೆ ಒಪ್ಪಿಗೆ ನೀಡಿದ್ದಾರೆ ಎಂದರು. ಪೂರ್ವಭಾವಿ ಸಭೆಯಲ್ಲಿ ಪಕ್ಷದ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಎಂ.ಷರೀಫ್, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡೆನ್ನಿ ಬರೋಶ, ವೀರಾಜಪೇಟೆ ನಗರ ಸಮಿತಿ ಅಧ್ಯಕ್ಷ ಪಿ.ಎ.ಮಂಜುನಾಥ್, ಯೋಗೀಶ್ ನಾಯ್ಡು, ನಿತೀನ್, ನೂರ್ ಅಹಮ್ಮದ್, ಸುನಿಲ್, ಸುರೇಶ್, ಕಿರಣ್ ಮತ್ತಿತರರು ಹಾಜರಿದ್ದರು.