ಗುಡ್ಡೆಹೊಸೂರು, ಫೆ. 26: ಇಲ್ಲಿನ ಶಾಲಾ ಆವರಣದಲ್ಲಿ ಇಲ್ಲಿನ ಹಿತರಕ್ಷಣಾ ಸಮಿತಿ ವತಿಯಿಂದ 2ನೇ ವರ್ಷದ ಮುಕ್ತ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟ ನಡೆಯುತ್ತಿದೆ. ಈ ಪಂದ್ಯಾಟಕ್ಕೆ ಬೆಳಿಗ್ಗೆ ಬೊಳ್ಳುರು ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ನಡೆಸಿ ಕ್ರೀಡಾಜೋತಿಯನ್ನು ಶಾಲಾ ಆವರಣಕ್ಕೆ ತಂದು ಚಾಲನೆ ನೀಡಲಾಯಿತು.
ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ಭಾರತಿ ಕ್ರೀಡಾಜ್ಯೋತಿ ಸ್ವೀಕರಿಸಿದರು. ಬಸವನಹಳ್ಳಿಯ ಮೊರಾರ್ಜಿ ವಸತಿ ಶಾಲಾ ಮಕ್ಕಳು ಈ ಜ್ಯೋತಿಯನ್ನು ತಂದರು. ನಂತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಬಿ.ಎನ್. ಶಶಿಕುಮಾರ್ ಅವರು ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದಿಶ್‍ಕುಮಾರ್ ಮಾತನಾಡಿ, ಕೊಡಗಿನ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ದೇಶದ ತಂಡದಲ್ಲಿ ಸ್ಥಾನಪಡೆದಿರುವ ಈ ಪುಟ್ಟಜಿಲ್ಲೆಯಲ್ಲಿ ಈ ರೀತಿಯ ಪಂದ್ಯಾಟ ನಡೆಯುತ್ತಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಇಲ್ಲಿನ ಪಂಚಾಯಿತಿ ಅಧ್ಯಕ್ಷೆ ಮಾತನಾಡಿ, ಜಾತಿ, ಮತಗಳನ್ನು ಮರೆತು ಎಲ್ಲರನ್ನು ಒಗ್ಗೂಡಿಸಲು ಈ ರೀತಿಯ ಪಂದ್ಯಾಟಗಳು ಸಾಕ್ಷಿಯಾಗಲಿವೆ ಎಂಬದಾಗಿ ತಿಳಿಸಿದರು. ಪಿ.ಡಿ.ಓ. ಶಾಂತಮ್ಮಯ್ಯ, ತಾ.ಪಂ. ಸದಸ್ಯೆ ಪುಷ್ಪ, ವಿ.ಎಸ್.ಎಸ್. ಬ್ಯಾಂಕಿನ ಉಪಾಧ್ಯಕ್ಷ ಬಿ.ಎಸ್. ಧನಪಾಲ್, ಉದ್ಯಮಿ ಸತ್ಯ, ಗುತ್ತಿಗೆದಾರ ಎಂ.ಆರ್. ಉತ್ತಪ್ಪ, ಇಲ್ಲಿನ ಕ್ರೌನ್‍ಹೋಟೆಲ್ ಮಾಲಿಕ ಸಮೀರ್, ಪಂಚಾಯಿತಿ ಸದಸ್ಯರಾದ, ಪ್ರವೀಣ್, ನಾರಾಯಣ, ಪ್ರಸನ್ನ, ಡಾಟಿ, ಹೇಮಾ, ಉಪಾಧ್ಯಕ್ಷೆ ಲೀಲಾವತಿ, ಮತ್ತು ಹಿತರಕ್ಷಣ ಸಮಿತಿಯ ಸದಸ್ಯರು ಹಾಜರಿದ್ದರು, ಅಲ್ಲದೆ ಎಸ್,ಡಿ.ಎಂ.ಸಿ. ಅಧ್ಯಕ್ಷರಾದ ಬಿ.ಎಸ್. ದಿನೇಶ್ ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ಯಶುಮತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕ್ರೀಡಾಕೂಟದಲ್ಲಿ ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಹಗ್ಗಜಗ್ಗಾಟ ನಡೆಯಿತು. ಜಿಲ್ಲೆಯ ಹಲವಾರು ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಭಿ ಮುಂತಾದವರು ಭಾಗವಹಿಸಿದ್ದರು.