ಕುಶಾಲನಗರ, ಫೆ. 26: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ಕಾವೇರಿ ತಾಲೂಕು ರಚನೆಗೆ ರಾಜ್ಯದ ಸಚಿವ ಸಂಪುಟ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಸರಕಾರಕ್ಕೆ ಧನ್ಯವಾದ ಸಮರ್ಪಿಸುವದರೊಂದಿಗೆ ನೂತನ ತಾಲೂಕು ರಚನೆ ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಕಾವೇರಿ ತಾಲೂಕು ಹೋರಾಟ ಸಮಿತಿ ಕೃತಜ್ಞತೆ ಸಮರ್ಪಿಸಿದೆ.

ಕಾವೇರಿ ತಾಲೂಕು ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡ ಪ್ರಮುಖರು ಸುದೀರ್ಘ ಎರಡು ದಶಕಗಳಿಗಿಂತಲೂ ಅಧಿಕ ಸಮಯದ ಹೋರಾಟದ ವಿವಿಧ ಮಜಲುಗಳನ್ನು ಮೆಲುಕು ಹಾಕಿದರು. ತಾ. 28 ರಂದು ಜಿಲ್ಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡುವ ಸಂದರ್ಭ ಅಧಿಕೃತವಾಗಿ ಘೋಷಣೆ ಯಾಗಲಿರುವ ಹಿನ್ನೆಲೆಯಲ್ಲಿ ಸಮಿತಿ ಪ್ರಮುಖರು ಚರ್ಚೆ ನಡೆಸಿದರು. ಬಸವನಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಕುಶಾಲನಗರ ಜನತೆ ಪರವಾಗಿ ಪೌರ ಸನ್ಮಾನ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ರಾಜ್ಯ ಸರಕಾರದ ದಿಟ್ಟ ನಿಲುವು ಕಾವೇರಿ ನಾಡಿಗೆ ನೀಡಿದ ಕೊಡುಗೆಯಾಗಿದೆ. ಕುಶಾಲನಗರಕ್ಕೆ ಈ ಹಿಂದೆಯೇ ತಾಲೂಕು ಭಾಗ್ಯ ದೊರಕಬೇಕಿತ್ತು. ನಿರಂತರ ಹೋರಾಟ ಫಲದಿಂದ ಕೊನೆಗೂ ಅವಕಾಶ ಲಭಿಸಿದೆ ಎಂದರು.ತಾ. 28 ರಂದು ಕುಶಾಲನಗರದ ಬಸವನಹಳ್ಳಿಗೆ ಬರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಊರಿನ ನಾಗರಿಕ ಸನ್ಮಾನ ನೀಡಬೇಕಿರುವದು ನಮ್ಮ ಕರ್ತವ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರುಗಳು ನೇರವಾಗಿ ದೂರವಾಣಿ ಮೂಲಕ ಹೋರಾಟದ ಫಲಶೃತಿಗೆ ಅಭಿನಂದನೆ ಹೇಳಿರುವ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು.

ತಾಲೂಕು ಹೋರಾಟಕ್ಕೆ ಪೂರಕವಾಗಿ ನಡೆದ ಹೋರಾಟದ ಕುರಿತು ಸಮಿತಿ ಪ್ರಮುಖರಾದ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ ಸಭೆಗೆ ವಿವರಿಸಿದರು. ಸಭೆಯಲ್ಲಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಕೆ.ನಾಗೇಂದ್ರ ಮಾತನಾಡಿ, ಹೋರಾಟ ಸಂದರ್ಭ ನಿರಂತರವಾಗಿ ಸಹಕರಿಸುವದರೊಂದಿಗೆ ಕೈಜೋಡಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಸುನಿತಾ ಕೇಂದ್ರ ಹಾಗೂ ಸ್ಥಾನೀಯ ಸಮಿತಿಯ ಟಿ.ಆರ್.ಶರವಣಕುಮಾರ್, ಎಂ.ವಿ.ನಾರಾಯಣ್, ಶೇಖ್ ಖಲೀಮುಲ್ಲಾ, ಡಾ.ಶಶಿಕಾಂತ್ ರೈ, ಅಬ್ದುಲ್ ಖಾದರ್, ಜೋಸೆಫ್ ವಿಕ್ಟರ್ ಸೋನ್ಸ್, ಎಸ್.ಕೆ.ಸತೀಶ್, ಕೆ.ಎಸ್.ರಾಜಶೇಖರ್, ಸುಂಟಿಕೊಪ್ಪ ಸೆಬಾಸ್ಟಿಯನ್, ಕೆ.ಎಸ್.ಕೃಷ್ಣೇಗೌಡ, ಎನ್.ಕೆ.ಮೋಹನ್‍ಕುಮಾರ್, ವಿ.ಪಿ.ನಾಗೇಶ್, ಸುಂಟಿಕೊಪ್ಪ ಗ್ರಾಪಂ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ವಾಲ್ನೂರು ಶಾಂತಕುಮಾರ್, ಕೆ.ಎನ್.ದೇವರಾಜ್, ಮುಸ್ತಾಫ ಸೇರಿದಂತೆ ಸ್ಥಾನೀಯ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.