ಸೋಮವಾರಪೇಟೆ,ಫೆ.24: ವಿದ್ಯಾವಂತರೇ ಸಮಾಜದಲ್ಲಿ ಹಾದಿ ತಪ್ಪುತ್ತಿರುವದು ದುರಂತ. ಈ ನಿಟ್ಟಿನಲ್ಲಿ ಸಂಸ್ಕಾರಯುತ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ ಎಂದು ಬೆಂಗಳೂರು ಸರ್ಪ ಭೂಷಣ ಮಠಾಧೀಶ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ವಿಷಾದಿಸಿದರು.

ಮಸಗೋಡು ಚನ್ನಮ್ಮ ಟ್ರಸ್ಟ್ ಆಶ್ರಯದಲ್ಲಿ ಮಸಗೋಡು ಚನ್ನಮ್ಮ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು. ಆದರೆ ಇಂದು ಶಿಕ್ಷಣ ಮತ್ತು ಬುದ್ದಿವಂತಿಕೆ ಪಡೆದವರೇ ಹಾದಿ ತಪ್ಪುತ್ತಿರುವದು ಈ ದೇಶದ ದುರಂತ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಮಾತನಾಡಿ, ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಮುಂದಾಲೋಚನೆ ಇಟ್ಟುಕೊಂಡು ಶಿಕ್ಷಣ ಕೊಡಿಸಲು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೋಮವಾರಪೇಟೆಯ ವಿರಕ್ತ ಮಠಾಧೀಶ ಶ್ರೀ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿ, ಸುಶಿಕ್ಷಿತರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸಬೇಕು ಎಂದರು.

ಕೇಂದ್ರ ಆಹಾರ ಸಂಶೋಧನಾ ತರಬೇತಿ ಕೇಂದ್ರದ ನಿವೃತ್ತ ವಿಜ್ಞಾನಿ ಡಾ. ಸಿ.ಎಂ. ಸೌಭಾಗ್ಯ ಮಾತನಾಡಿ, ಭತ್ತದ ಬೆಳೆ ಹಾಗೂ ಅಕ್ಕಿಯ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶ್, ಡಿ.ಎಂ. ಚಿನ್ನಪ್ಪ, ಚನ್ನಪ್ಪ, ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಪ.ಪಂ. ಮಾಜೀ ಅಧ್ಯಕ್ಷೆ ಉಷಾ ತೇಜಸ್ವಿ, ಚನ್ನಮ್ಮ ಟ್ರಸ್ಟ್‍ನ ಕಾರ್ಯದರ್ಶಿ ಡಾ. ಎಂ.ಸಿ. ದಿವಾಕರ್, ಟ್ರಸ್ಟಿಗಳಾದ ಆಶಾದಿವಾಕರ್, ಮುಖ್ಯೋಪಾಧ್ಯಾಯ ಸಂತೋಷ್ ಹಿರೇಮಠ ಉಪಸ್ಥಿತರಿದ್ದರು.

ಅಬಾಕಸ್ ಶಿಕ್ಷಕಿ ಸುಕನ್ಯ, ಕರಾಟೆ ತರಬೇತುದಾರ ಅರುಣ್‍ಕುಮಾರ್, ಅಡ್ವೆಂಚರ್ಸ್ ನೃತ್ಯ ಕಲಾ ತಂಡದ ಚೇತನ್ ಹಾಗೂ ದರ್ಶನ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.