ಶನಿವಾರಸಂತೆ, ಫೆ. 24: ‘ಕಸದಿಂದ ರಸ’ ಎಂಬ ಮಾತಿಗೆ ಪುಷ್ಠಿ ನೀಡುವಂತೆ ಉತ್ತರ ಕೊಡಗಿನ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಏಕಸೂತ್ರದಿಂದ ಅದ್ವಿತೀಯ ಸಾಧನೆಯತ್ತ ಮುನ್ನಡೆಯುತ್ತಿದ್ದಾರೆ. ವಿದ್ಯಾಸಂಸ್ಥೆಯಲ್ಲಿ ಜ್ಞಾನದೊಂದಿಗೆ ವಿಜ್ಞಾನದತ್ತ ಪ್ರತ್ಯಕ್ಷ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಹಿಂದೆ ಸೌರವಿದ್ಯುತ್‍ಗೆ ಒತ್ತು ನೀಡಿದ್ದ ಈ ಶಾಲೆ ಇದೀಗ ಜೈವಿಕ ಅನಿಲ ಉತ್ಪಾದಿಸುವಲ್ಲಿ ಯಶಸ್ಸು ಕಂಡುಕೊಂಡಿದೆ.
ಶಾಲಾ ತ್ಯಾಜ್ಯದಿಂದಲೇ...
ಸ್ವಅನುಭವದ ಕಲಿಕೆಗೆ ಹೆಸರಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಕಾಳಜಿಯ ಮತ್ತೊಂದು ಕಾರ್ಯ ಸೇರ್ಪಡೆಯಾಗಿದೆ ಅದುವೇ ಜೈವಿಕ ಅನಿಲ ಉತ್ಪಾದನಾ ಘಟಕದ ಸ್ಥಾಪನೆ. ಈ ಹಿಂದೆ ಸೋಲಾರ್ ಪಾರ್ಕ್‍ನ್ನು ಸ್ಥಾಪಿಸಿ ಶಾಲಾ ಕಂಪ್ಯೂಟರ್ ಮತ್ತು ದೀಪಗಳು ಬೆಳಗುವಂತೆ ಮಾಡಿ ಸೌರಶಕ್ತಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದ್ದರು. ಈಗ ಶಾಲಾ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಿ ಇಂಧನ ಉಳಿತಾಯದ ಅರಿವು ಮೂಡಿಸಿದ್ದಾರೆ. ಐದನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಜೈವಿಕ ಅನಿಲ ಉತ್ಪಾದನೆಯ ಕುರಿತಾಗಿ ತರಕಾರಿ ಸಿಪ್ಪೆ, ಆಹಾರ ತ್ಯಾಜ್ಯ ಸಸ್ಯದ ಅವಶೇಷ ಪ್ರಾಣಿಗಳ ಸಗಣಿ ಇತ್ಯಾದಿಗಳನ್ನು ವಾಯುವಿನ ಸಂಪರ್ಕವಿಲ್ಲದೆ ಕೊಳೆಯಿಸಿದಾಗ ಜೈವಿಕ ಅನಿಲ ಉತ್ಪತ್ತಿಯಾಗುತ್ತದೆ ಎಂಬದನ್ನು ಸವಿಸ್ತಾರವಾಗಿ ತಿಳಿಸಲಾಗಿದೆ ಇದನ್ನು ಕಾರ್ಯರೂಪದಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ಯೋಚಿಸಿದ ಶಿಕ್ಷಕರು ಇದಕ್ಕಾಗಿ ಬಳಸಿಕೊಂಡಿದ್ದು, ಶಾಲಾ ಆವರಣದಲ್ಲಿ ನಿರುಪಯುಕ್ತವಾಗಿ ದುಸ್ಥಿತಿಯಲ್ಲಿದ್ದ ಮಳೆ ಕೊಯ್ಲು ಟ್ಯಾಂಕನ್ನು. ಇಂದು ಸರ್ವೆ ಸಾಮಾನ್ಯವಾಗಿ ಎಲ್ಲಾ ಸರ್ಕಾರಿ ಶಾಲಾ ಆವರಣದಲ್ಲಿ ಮಳೆ ಕೊಯ್ಲು ಘಟಕವನ್ನು ಕಾಣಬಹುದು ಆದರೆ ಅದು ಎಲ್ಲಿಯೂ ಕೂಡ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಕೆಲವೆಡೆ ಸಂಪೂರ್ಣವಾಗಿ ಹಾಳಾಗಿದ್ದರೆ ಕೆಲವೆಡೆ ನೀರು ಸಂಗ್ರಹಣಾ ತೊಟ್ಟಿಯಾಗಿ ಪರಿವರ್ತಿಸಲಾಗಿದೆ. ಇದೇ ಮಳೆ ಕೊಯ್ಲು ಘಟಕವನ್ನು ಅತಿ ಕಡಿಮೆ ವೆಚ್ಚದಲ್ಲಿ ದುರಸ್ತಿಗೊಳಿಸಿ ಸ್ವತಃ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಜೈವಿಕ ಅನಿಲ ಉತ್ಪಾದನಾ ಘಟಕವನ್ನಾಗಿ ಪರಿವರ್ತಿಸಿದರು. ಹಳೆಯ ಬ್ಯಾರಲ್ (ಡ್ರಮ್ ) ಭಾಗವನ್ನು ಬಳಸಿಕೊಂಡು ತರಕಾರಿ ತ್ಯಾಜ್ಯ ಉಳಿಕೆ ಆಹಾರ ಪದಾರ್ಥಗಳನ್ನು ಹಾಕುವ ಪೂರ್ವ ಸಂಗ್ರಹಣಾ ತೊಟ್ಟಿಯನ್ನು ಮಾಡಿದರು. ಇಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಆಯ್ದ ಕೊಳೆಯುವಂತಹ ಕಸ ಕಡ್ಡಿಗಳನ್ನು ಹಾಕುತ್ತಾರೆ ಮತ್ತು ಮಧ್ಯಾಹ್ನದ ಊಟದ ನಂತರ ಕೈ ಮತ್ತು ತಟ್ಟೆಗಳನ್ನು ಈ ಘಟಕದಲ್ಲಿ ತೊಳೆಯುತ್ತಾರೆ; ಅಲ್ಲದೆ ಅಡುಗೆ ಮಾಡುವಾಗ ಉಳಿಯುವ ತರಕಾರಿ ಸಿಪ್ಪೆ ಇತ್ಯಾದಿ ತ್ಯಾಜ್ಯಗಳನ್ನು ಈ ಘಟಕದಲ್ಲಿ ಹಾಕಲಾಗುತ್ತದೆ. ಇಲ್ಲಿ ತರಕಾರಿ ತ್ಯಾಜ್ಯ ಬೆಂದ, ಬೆಂದಿರದ ಹಳಸಿದ ಪದಾರ್ಥ, ಸಾರ ತೆಗೆದ ಟೀ ಪುಡಿ, ಹಾಳಾಗಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹಾಕಬಹುದು; ಆದರೆ ಕಾಯಿಯ ಕರಟ, ನಾರು ಮೊಟ್ಟೆಯ ಕವಚ ಈರುಳ್ಳಿ ಮತ್ತು ಮೂಳೆಗಳನ್ನು ಹಾಕಬಾರದು, ಪೂರ್ವ ಸಂಗ್ರಹಣಾ ತೊಟ್ಟಿಯಲ್ಲಿ ಹಾಕಿದ ತ್ಯಾಜ್ಯಗಳು ನೇರವಾಗಿ ಮಳೆ ಕೊಯ್ಲು ಘಟಕದೊಳಗೆ ಹೋಗಿ ವಾಯುವಿನ ಸಂಪರ್ಕವಿಲ್ಲದೆ ಕೊಳೆಯಲು ಪ್ರಾರಂಭಿಸುತ್ತದೆ ಮತ್ತು ಜೈವಿಕ ಅನಿಲ ಉತ್ಪತ್ತಿಯಾಗುತ್ತದೆ.
ಸುಮಾರು ಐದು ಕೆಜಿ ಹಸಿ ಕಸ ತ್ಯಾಜ್ಯದಿಂದ ಅರ್ಧ ಕೆಜಿಯಷ್ಟು ಜೈವಿಕ ಅನಿಲ ಉತ್ಪತ್ತಿ ಯಾಗುತ್ತದೆ ಎಂದು ಶಿಕ್ಷಕರು ತಿಳಿಸುತ್ತಾರೆ. ಜೈವಿಕ ಅನಿಲ ಉತ್ಪತ್ತಿ ನಂತರ ಹೊರಬರುವ ಬಗ್ಗಡವನ್ನು ಕಾಂಪೋಸ್ಟ್ ಗೊಬ್ಬರ ಗುಂಡಿಗೆ ಸೇರುವಂತೆ ಸಂಪರ್ಕ ಕಲ್ಪಿಸಿದ್ದು ಇದು ಕೂಡ ಶಾಲಾ ತರಕಾರಿ ತೋಟಕ್ಕೆ ಜೈವಿಕ ಗೊಬ್ಬರವನ್ನು ಒದಗಿಸುತ್ತದೆ. ಜೈವಿಕ ಅನಿಲ ಘಟಕದ ಸ್ಥಾಪನೆಯಿಂದ ಶಾಲಾ ತ್ಯಾಜ್ಯದ ಪರಿಣಾಮಕಾರಿ ವಿಲೇವಾರಿ ಸಾಧ್ಯವಾಗುತ್ತದೆಯಲ್ಲದೆ. ತ್ಯಾಜ್ಯವನ್ನು ಒಂದು ದೊಡ್ಡ ಸಂಪನ್ಮೂಲವಾಗಿ ಬಳಸಿಕೊಳ್ಳಲಾಗುತ್ತಿದೆ. ಜೈವಿಕ ಇಂಧನ ಶಕ್ತಿಯು ಮುಂದಿನ ದಿನಗಳಲ್ಲಿ ಅತಿದೊಡ್ಡ ಇಂಧನ ಮೂಲವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ, ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ, ಹಣ ಪಾವತಿಸಿದರೂ ಗ್ಯಾಸ್ ಸಿಗದಂಥ ಪರಿಸ್ಥಿತಿ ಎದುರಾಗಬಹುದು. ಇದಕ್ಕೆಲ್ಲ ಪರಿಹಾರವಾಗಿ ನಿಲ್ಲುವಂತದ್ದು ಜೈವಿಕ ಅನಿಲ. ಕಡಿಮೆ ವೆಚ್ಚದಲ್ಲಿ ಪ್ಲಾಸ್ಟಿಕ್ ಸಂಗ್ರಹಣಾ ತೊಟ್ಟಿಗಳನ್ನು ರೂಪಿಸಿಕೊಂಡು ಜೈವಿಕ ಅನಿಲ ಉತ್ಪಾದನೆ ಮಾಡಿ ಬಳಸಿಕೊಳ್ಳ ಬಹುದಾಗಿದೆ ಇದರಿಂದ ತ್ಯಾಜ್ಯ ದಿಂದ ಮುಕ್ತಿ ಹೊಂದುವದಲ್ಲದೇ ತ್ಯಾಜ್ಯವನ್ನು ಒಂದು ಸಂಪನ್ಮೂಲವಾಗಿ ರೂಪಿಸಿಕೊಳ್ಳಬಹುದಾಗಿದೆ. ಈಗಾಗಲೇ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ ಡೀಸೆಲ್ ಉತ್ಪಾದನೆಗಾಗಿ ಬೇವು, ಹೊಂಗೆ, ಹಿಪ್ಪೆ, ಸಿಮರೂಬ ಅಮೂರ ಜಟ್ರೋಫಾದಂತಹ ಮರಗಿಡಗಳನ್ನು ಹೆಚ್ಚು ಹೆಚ್ಚು ಬೆಳೆÀಸಿ ಇವುಗಳಿಂದ ಸಿಗುವ ಬೀಜಗಳನ್ನು ಸಂಸ್ಕರಿಸಿ ಜೈವಿಕ ಡೀಸೆಲ್ ತಯಾರಿಸುವ ಕಾರ್ಯ ಹಲವೆಡೆ ಮಾಡುತ್ತಿರುವದು ಕಂಡುಬಂದಿದೆ.
ಒಟ್ಟಿನಲ್ಲಿ ಪುಟ್ಟ ಶಾಲೆಯೊಂದರಲ್ಲಿ ಜೈವಿಕ ಇಂಧನದ ಬಗ್ಗೆ ಅರಿವು ಮೂಡಿಸುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ.
-ನರೇಶ್.