ಗೋಣಿಕೊಪ್ಪಲು, ಫೆ. 25: ಮಾರ್ಚ್ ಅಂತ್ಯದೊಳಗೆ ಇಲಾಖೆಗಳು ಯೋಜನೆಗಳನ್ನು ಅನುಷ್ಠಾನಗೊಳಿಸು ವಂತೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಡಿಕೇರಿಯ ತಮ್ಮ ಕಚೇರಿಯಲ್ಲಿ ಆಯೋಜನೆ ಗೊಂಡಿದ್ದ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಇಲಾಖೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆದ ಅವರು, ಯಾವದೇ ಕಾರಣಕ್ಕೂ ಇಲಾಖೆಗೆ ಮಂಜೂರಾಗಿರುವ ಅನುದಾನ ಹಿಂದಕ್ಕೆ ಹೋಗಬಾರದು. ಅನುದಾನ ಬಳಕೆಯಾಗದೆ ಉಳಿಸಿ ಕೊಂಡಲ್ಲಿ ಅಂತಹ ಅಧಿಕಾರಿಗಳ ಮೇಲೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವದೆಂದು ಹೇಳಿದರು.

ಜಿಲ್ಲೆಯ ವಿವಿಧ ಭಾಗದಲ್ಲಿರುವ ಆದಿವಾಸಿಗಳ ಕುಟುಂಬಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲು ಜಿಲ್ಲಾ ಗಿರಿಜನ ಕಲ್ಯಾಣಾಭಿವೃದ್ಧಿ ಅಧಿಕಾರಿ ಶಿವಕುಮಾರ್ ಅವರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ನಿಗಮ ಅಧಿಕಾರಿ, ಅಂಬೇಡ್ಕರ್ ನಿಗಮ ಅಭಿವೃದ್ಧಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಆದಿವಾಸಿಗಳು ಮೂಲಭೂತ ಸಮಸ್ಯೆಗಳ ಬಗ್ಗೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.