ಕುಶಾಲನಗರ, ಫೆ. 25: ಸಮಾಜದ ಎಲ್ಲಾ ರಂಗಗಳು ಕೃಷಿ ಯನ್ನು ಅವಲಂಬಿಸಿದ್ದು ರೈತಾಪಿ ವರ್ಗದ ಏಳಿಗೆಗೆ ಸಂಘಗಳು ಕೈಜೋಡಿಸಬೇಕಾಗಿದೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಕರೆ ನೀಡಿದ್ದಾರೆ.
ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸಂಸ್ಥೆಯ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜಾಗತಿಕ ಹವಾಮಾನ ಏರುಪೇರು ನಡುವೆ ಅನಾಹುತಗಳು ಉಂಟಾಗುತ್ತಿದ್ದು, ರೈತಾಪಿ ವರ್ಗ ಪರಿತಪಿಸುವಂತಾಗಿದೆ ಎಂದರು. ರಾಷ್ಟ್ರೀಕೃತ ಬ್ಯಾಂಕುಗಳು ಸಾಮಾನ್ಯ ಜನರ ಬವಣೆಗಳಿಗೆ ಪರಿಹಾರ ನೀಡುವಲ್ಲಿ ವಿಫಲ ವಾಗಿದ್ದು, ಸಂಘ-ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರದ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸ್ಪರ್ಧಾತ್ಮಕ ವ್ಯವಸ್ಥೆಯ ನಡುವೆ ಬ್ಯಾಂಕಿಂಗ್ ಕ್ಷೇತ್ರ ಕಾರ್ಯ ನಿರ್ವಹಿಸಬೇಕಾಗಿದ್ದು, ಗ್ರಾಹಕರು ನಿಗದಿತ ಅವಧಿಯಲ್ಲಿ ಸಾಲ ಮರು ಪಾವತಿ ಮಾಡುವದು ಜವಾಬ್ದಾರಿ ಯಾಗಿದೆ. ಬ್ಯಾಂಕು ಹಾಗೂ ಗ್ರಾಹಕ ಒಂದು ನಾಣ್ಯದ ಎರಡು ಮುಖ ಗಳಿದ್ದಂತೆ. ಸಮರ್ಪಕವಾಗಿ ಕಾರ್ಯನಿರ್ವಹಿಸಿದಲ್ಲಿ ಸಂಸ್ಥೆಯ ಉದ್ದೇಶ ಈಡೇರಲು ಸಾಧ್ಯವಾಗುತ್ತದೆ ಎಂದರು.
ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಉಪಾಧ್ಯಕ್ಷ ರವೀಂದ್ರನಾಥ್ ಕೇವಳ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಕೊಡಗು ಗೌಡ ಸಮಾಜ ಬೆಂಗಳೂರು ಘಟಕದ ಅಧ್ಯಕ್ಷ ಅಮೆ ಸೀತಾರಾಮ, ಕುಶಾಲನಗರ ಅಧ್ಯಕ್ಷ ಕೇಚಪ್ಪನ ಮೋಹನ್‍ಕುಮಾರ್, ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ರಮೇಶ್ ಉಪಸ್ಥಿತರಿದ್ದರು.
ಹರೀಶ್ ದೇವಂಗೋಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಇದ್ದರು. ನಿರ್ದೇಶಕ ನಂಗಾರು ನಿಂಗರಾಜು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳಾಡಿ ದರು, ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.